ಉಡುಪಿ: ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಪ್ರತಿಷ್ಟೆಯಿಂದಾಗಿ ಕಾರ್‍ಯಕರ್ತರ ಕಡೆಗಣನೆಯಾಗುತ್ತಿದೆ, ಅಲ್ಲದೇ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಕಾಂಗ್ರೆಸ್ ಕಡೆಗಣಿಸಿರುವುದು ಬೇಸರ ಮೂಡಿಸಿದೆ ಎಂದು ಆರೋಪಿಸಿ ಐರೋಡಿ ಗ್ರಾ.ಪಂ.ಅಧ್ಯಕ್ಷರು ಸೇರಿದಂತೆ, ಐರೋಡಿ, ಪಾಂಡೇಶ್ವರ, ಕೋಡಿ ವ್ಯಾಪ್ತಿಯ ಹಲವು ಮಂದಿ ಕಾಂಗ್ರೆಸ್ ಮುಖಂಡರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಬುಧವಾರ ಸಾಸ್ತಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ಐರೋಡಿ ಗ್ರಾ.ಪಂ.ಅಧ್ಯಕ್ಷ ಮೋಸೆಸ್ ರೋಡಿಗ್ರಸ್, ಸದಸ್ಯರಾದ ಶಿವರಾಮ್ ಶ್ರೀಯಾನ್, ಸುಧಾಕರ ಪೂಜಾರಿ, ಸಾಸ್ತಾನ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಶೆಟ್ಟಿ, ನಿರ್ದೇಶಕ ಶ್ರೀಧರ ಪಿ.ಎಸ್., ಕೋಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮಣ ಸುವರ್ಣ, ಕೋಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಂಕರ್ ಬಂಗೇರ, ನಾಗೇಶ ಪೂಜಾರಿ, ಪಾಂಡೇಶ್ವರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಶಾಂತ ಶೆಟ್ಟಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು.
ಚುನಾವಣೆಯಲ್ಲಿ ಕೆಲಸ ಮಾಡಲ್ಲ:
ಇನ್ನು ಐರೋಡಿ ಗ್ರಾಮಪಂಚಾಯತ್ ಮಹಿಳಾ ಸದಸ್ಯರು ತಟಸ್ಥರಾಗುವ ಬಗ್ಗೆ ತಿಳಿಸಿದ್ದಾರೆ. ಸದಸ್ಯರಾದ ಮೀನಾಕ್ಷಿ, ಫ್ಲೋರಿನ್ ಲೂವಿಸ್, ಆಶಾ, ಪದ್ಮಾವತಿ ಇವರು ಪಕ್ಷದಿಂದ ಕಾರ್‍ಯಕರ್ತರಿಗಾದ ಅನ್ಯಾಯವನ್ನು ಖಂಡಿಸಿ ಈ ಚುನಾವಣೆಯಲ್ಲಿ ತಟಸ್ಥರಾಗುವುದಾಗಿ ತಿಳಿಸಿದರು.
ಈ ಸಂದರ್ಭ ಹೆಗ್ಡೆ ಬೆಂಬಲಿಗರಾದ ಪ್ರಥ್ವಿರಾಜ್ ಶೆಟ್ಟಿ, ಗೋಪಾಲ ಬಂಗೇರ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.