ಬೆಂಗಳೂರು, ಫೆ. 11(ಪಿಟಿಐ): ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ .ಕಾಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬದಲಾವಣೆಯಾದ ತಿಂಗಳೊಳಗೆ ಹಿರಿಯ ಅಧಿಕಾರಿಗಳಿಬ್ಬರು ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ.
ಮಾರುಕಟ್ಟೆ ತಜ್ಞ ಮುಕೇಶ್ ಹಾಗೂ ಅಂಕಿತ್ ನಗೋರಿ ಇಬ್ಬರು ರಾಜೀನಾಮೆ ಪತ್ರ ರವಾನಿಸಿದ್ದಾರೆ. ಜನವರಿ ತಿಂಗಳಿನಲ್ಲಿ ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದಿದ್ದರು. ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಿಇಒ ಆಗಿ ತಕ್ಷಣದಿಂದ ಅಧಿಕಾರವಹಿಸಿಕೊಳ್ಳುತ್ತಾರೆ ಎಂದು ಘೋಷಿಸಲಾಗಿತ್ತು. ಈಗ ವಾಣಿಜ್ಯ, ಜಾಹೀರಾತು ವಿಭಾಗದ ಮುಖ್ಯಸ್ಥ ಮುಕೇಶ್ ಬನ್ಸಾಲ್ ಅವರ ನಿರ್ಗಮನ ಫ್ಲಿಪ್ ಕಾರ್ಟ್ ಗೆ ಭಾರಿ ಹೊಡೆತ ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಮುಕೇಶ್ ಅಲ್ಲದೆ ಫ್ಲಿಪ್ ಕಾರ್ಟಿನ ಬಿಸಿನೆಸ್ ಅಧಿಕಾರಿ ಅಂಕಿತ್ ನಗೋರಿ ಕೂಡಾ ಸಂಸ್ಥೆ ತೊರೆದು ಕ್ರೀಡಾಕ್ಷೇತ್ರದಲ್ಲಿ ಹೊಸ ಉದ್ಯಮ ಆರಂಭಿಸುತ್ತಿದ್ದಾರೆ.
ಮುಕೇಶ್ ಅವರು ಮಿಂಟ್ರಾ ಸಂಸ್ಥೆಯ ಮುಖ್ಯಸ್ಥರಾಗಿ ನಂ.1 ಫ್ಯಾಷನ್ ಪೋರ್ಟಲ್ ಆಗಿ ಹೊರಹೊಮ್ಮಲು ಕಾರಣರಾಗಿದ್ದರು. 2014ರಲ್ಲಿ ಮಿಂಟ್ರಾ.ಕಾಂ ಸಂಸ್ಥೆಯ ಫ್ಲಿಪ್ ಕಾರ್ಟ್ ಖರೀದಿಸಿತ್ತು. ಫ್ಲಿಪ್ ಕಾರ್ಟ್ ತೊರೆದರೂ ಸಲಹೆಗಾರರ ಸಮಿತಿಯಲ್ಲಿ ಮುಕೇಶ್ ಮುಂದುವರೆಯಲಿದ್ದಾರೆ. 2007ರಲ್ಲಿ ಮಿಂಟ್ರಾ ಆನ್ ಲೈನ್ ಶಾಂಪಿಂಗ್ ವೆಬ್ ಸೈಟ್ ಆರಂಭಿಸಿದ ಐಐಟಿ ಖರಗ್ ಪುರದ ಪದವೀಧರರಾದ ಮುಕೇಶ್ ಅವರು ಇ ಕಾಮರ್ಸ್ ಕ್ಷೇತ್ರದ ಪ್ರಮುಖರಲ್ಲಿ ಒಬ್ಬರೆನಿಸಿದ್ದಾರೆ. ಸುಮಾರು 2,000 ಕೋಟಿ ರು ಗಳಿಗೆ ಮಿಂಟ್ರಾ.ಕಾಂ ಅನ್ನು ಫ್ಲಿಪ್ ಕಾರ್ಟಿಗೆ ಮಾರಾಟ ಮಾಡಿದ್ದರು. ಅಮೇಜಾನ್ ಹಾಗೂ ಸ್ನಾಪ್ ಡೀಲ್ ಜೊತೆ ಪೈಪೋಟಿ ಎದುರಿಸುತ್ತಿರುವ ಫ್ಲಿಪ್ ಕಾರ್ಟ್ ಈಗ ಆಡಳಿತ ಮಂಡಳಿ ರಗಳೆ ಸರಿ ಪಡಿಸುವುದರಲ್ಲಿ ನಿರತವಾಗಿದೆ.