(File photo) ಕೊಡಗು, ಫೆ,13: ಗಾಂಜಾ ಸೇವಿಸಲು ಹಣಕ್ಕಾಗಿ ಹುಡುಕಾಡಿದ ಯುವಕರು ಹಣ ಸಿಗದಿದ್ದಾಗ ಮನೆಯ ಮಾಲೀಕ ಹಾಗೂ ಅವರ ಮೊಮ್ಮಗನನ್ನು ಕೊಂದು ಹಣ ದೋಚಿದ ಘಟನೆ ಕೊಡಗಿನ ಕುಶಾಲನಗರ ಸಮೀಪದ ಶಿರವೊಳಲು ಗ್ರಾಮದಲ್ಲಿ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.
ಕೊಲೆಯಾದವರು ಶಿರವೊಳಲು ಗ್ರಾಮದ ನಿವಾಸಿ ಕುಜಿಲಿ (75) ಮತ್ತು ಮೊಮ್ಮಗ ಅಮೃತ್ (16). ಅಮೃತ್ ತನ್ನ ಗೆಳೆಯರಾದ ಶಿವು(20) ಕುಮಾರ (21) ಶಿವ (22) ಮೊದಲಾದವರೊಂದಿಗೆ ತಾತ ಕುಜಿಲಿ ಅವರ ಮನೆಗೆ ಬಂದಿದ್ದನು. ಕುಜಿಲಿ ಮೇಲೆ ಹಲ್ಲೆ ಮಾಡಿ, ಬಳಿಕ ಮೊಮ್ಮಗನನ್ನು ಕೊಂದಿದ್ದಾರೆ.
ಘಟನೆಯ ವಿವರ: ಕುಜಿಲಿ ಅವರು ಅಡಿಕೆ ತೋಟ ಹೊಂದಿದ್ದು ಅಡಿಕೆ ಮಾರಿದ ಹಣವನ್ನು ಮನೆಯ ಬೀರುವಿನಲ್ಲಿ ಇಟ್ಟಿದ್ದರು. ಮೊಮ್ಮಗ ಅಮೃತ್ ಕುಶಾಲನಗರದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದು, ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದನು. ಅಮೃತ್ ನ ತಂದೆ ತಾಯಿ ದುಬಾಯ್ ನಲ್ಲಿ ವಾಸವಾಗಿದ್ದರು. ಆರ್ಥಿಕವಾಗಿ ಸದೃಢನಾದ ಈತ ಹುಡುಗರೊಂದಿಗೆ ಸೇರಿ ಗಾಂಜಾ ಸೇದುವ ಚಟಕ್ಕೆ ಬಿದ್ದಿದ್ದನು.
ಹಾಸ್ಟೆಲ್ ನಲ್ಲಿದ್ದ ಅಮೃತ್ ತನ್ನ ಗೆಳೆಯರಾದ ಶಿವು, ಕುಮಾರ ಶಿವ ಮೊದಲಾದವರೊಂದಿಗೆ ತಾತ ಕುಜಿಲಿ ಅವರ ಮನೆಗೆ ಬಂದಿದ್ದನು. ಗಾಂಜಾ ಮತ್ತಿನಲ್ಲಿದ್ದ ಹುಡುಗರು ಹಣ ಬೇಕೆಂದು ಕುಜಿಲಿ ಬಳಿ ಕೇಳಿದ್ದಾರೆ. ಇಲ್ಲ ಎಂದು ಹೇಳಿದಾಗ ಎಲ್ಲರು ಸೇರಿ ಕುಜಿಲಿಯನ್ನು ಸಾಯಿಸಿ ಬೀರುವಿನಲ್ಲಿದ್ದ ಹಣ ಹೊತ್ತೊಯ್ದಿದ್ದಾರೆ.
ಎತ್ತಿಕೊಂಡು ಬಂದ ಹಣವನ್ನು ಹಂಚಿಕೊಳ್ಳುವಾಗ ಅಮೃತ್, ಕುಮಾರ, ಶಿವು, ಶಿವ ಇವರ ನಡುವೆ ಜಗಳವಾಗಿದೆ. ಆಗ ಆ ಮೂವರು ಸೇರಿ ಅಮೃತ್ ನನ್ನು ಕೊಲೆಗೈದು ಹಣ ಒಯ್ದಿದ್ದಾರೆ. ಶುಕ್ರವಾರ ಮನೆಗೆ ಬೀಗ ಹಾಕಿದನ್ನು ಗಮನಿಸಿದ ನೆರೆಯವರು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಪೊಲೀಸರು. ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ರಕ್ತದ ಕಲೆಗಳು ಕಂಡು ಬಂದಿದ್ದು,
ತೆಂಗಿನ ಗರಿಯ ಮಧ್ಯದಲ್ಲಿ ಅಮೃತ್ ನ ರಕ್ತಸಿಕ್ತ ಮೃತ ದೇಹ ಪತ್ತೆಯಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಅಮೃತನ ಜೇಬಿನಲ್ಲಿ ಬೀಡಿಗೆ ತುಂಬಿಸಿದ ಗಾಂಜಾ ಹಾಗೂ ಗಾಂಜಾ ಪುಡಿ ಪತ್ತೆಯಾಗಿದ್ದು, ಕೂಡಿಗೆ ವ್ಯಾಪ್ತಿಯಲ್ಲಿ ಈ ಹದಿಹರೆಯದ ಯುವಕರಿಗೆ ಗಾಂಜಾ ಸಪ್ಲೈ ಮಾಡುತ್ತಿರುವ ಜಾಲವನ್ನು ಪೊಲೀಸರು ಪತ್ತೆ ಹಚ್ಚುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.