ಸುಳ್ಯ, ಫೆ.13: ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಮೀನು ಶಿಕಾರಿಗೆ ತೆರಳಿದ್ದ ವ್ಯಕ್ತಿಯು ಗುಂಡೇಟಿಗೆ ಬಲಿಯಾಗಿದ್ದ ಪ್ರಕರಣವನ್ನು ಭೇದಿಸಿರುವ ದ.ಕ.ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಹತ್ಯೆಗೆ ಬಳಕೆಯಾಗಿದ್ದ ನಾಡಕೋವಿಯನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಡಾ.ಎಸ್.ಡಿಶರಣಪ್ಪ ಅವರು, ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚಲ್ಲಂಗಾಯದ ರಾಮಚಂದ್ರ ಮತ್ತು ವಿಶ್ವನಾಥ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಸಿಕ್ಕಿದ ಮಾಹಿತಿಯ ವಿವರ :
ತೊಡಿಕಾನದಲ್ಲಿ ತೋಟವೊಂದರಲ್ಲಿ ರೈಟರ್ ಆಗಿದ್ದ ಕೊಡಗು ಜಿಲ್ಲೆ ಕುದುರೆಪಾಯ ಮುದಡ್ಕ ನಿವಾಸಿ ಜಯರಾಮ ನಾಯ್ಕ ಅವರು ಕಳೆದ ಮಂಗಳವಾರ ತಡರಾತ್ರಿ ಸೋದರ ಹರೀಶ ನಾಯ್ಕ ಮತ್ತು ದೀಕ್ಷಿತ ಕುದುರೆಪಾಯ, ವೇಣುಗೋಪಾಲ ಕುದುರೆಪಾಯ ಹಾಗೂ ಹರೀಶ ಪಟ್ರಕೋಡಿ ಅವರೊಂದಿಗೆ ಮೀನು ಶಿಕಾರಿಗೆಂದು ಮಾಪಳಕಜೆ ತೋಡಿಗೆ ತೆರಳಿದ್ದರು. ಈ ವೇಳೆ ಪಕ್ಕದ ಕಾಡಿನಿಂದ ತೂರಿ ಬಂದಿದ್ದ ಗುಂಡು ಜಯರಾಮ ನಾಯ್ಕರಿಗೆ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಜಯರಾಮ ನಾಯ್ಕರ ಶವವನ್ನು ಎರಡು ಕಿ.ಮೀ. ದೂರದಿಂದ ಹೊತ್ತು ತಂದು ಅವರು ಕೆಲಸ ಮಾಡುತ್ತಿದ್ದ ತೋಟದ ಬಳಿ ಹಾಕಿದ್ದ ಜೊತೆಗಾರರು, ಅವರು ಬಹಿರ್ದೆಸೆಗೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಯಾರೋ ಅಪರಿಚಿತರು ಗುಂಡಿಟ್ಟು ಕೊಂದಿದ್ದಾರೆ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ, ಬೇಟೆಗೆ ತೆರಳಿದ್ದಾಗ ಇನ್ನೊಂದು ತಂಡ ಹಾರಿಸಿದ ಗುಂಡು ಜಯರಾಮರಿಗೆ ತಗುಲಿತ್ತು ಎಂದು ಹೇಳಿಕೆ ನೀಡಿದ್ದರು. ಗೊಂದಲಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಪೊಲಿಸರು ಈ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದರು.
ತನಿಖೆಯ ವೇಳೆ ಲಭ್ಯ ಮಾಹಿತಿಗಳ ಆಧಾರದಲ್ಲಿ ಅದೇ ರಾತ್ರಿ ಪಕ್ಕದ ಕಾಡಿಗೆ ಶಿಕಾರಿ ಮಾಡಲು ಬಂದಿದ್ದ ರಾಮಚಂದ್ರ ಮತ್ತು ವಿಶ್ವನಾಥನನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ವಶದಲ್ಲಿದ್ದ ನಾಲ್ವರನ್ನು ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿತ್ತು.