ಕೈಕಂಬ,ಫೆ.15 : ಶ್ರಾದ್ಧಾಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಹಸವಾರೆ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಡ್ಡೂರು ಬಳಿಯ ನೂಯಿ ಎಂಬಲ್ಲಿ ಭಾನುವಾರ ಮಧ್ಯಾಹ್ನದ ವೇಳೆ ಸಂಭವಿಸಿದೆ.
ಮೃತ ದುರ್ಧೈವಿ ಮಹಿಳೆಯನ್ನು ಬಂಟ್ವಾಳ ಭಂಡಾರಿಬೆಟ್ಟು ನಿವಾಸಿ ಪುರಂದರ ಆಚಾರ್ಯ ಎಂಬವರ ಪತ್ನಿ ಹೇಮಾವತಿ ಆಚಾರ್ಯ(65) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಪುರಂದರ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣನಾದ ಕಾರ್ ಚಾಲಕ ಕಾರ್ ಸಮೇತ ಪರಾರಿಯಾಗಿದ್ದಾನೆ.
ಘಟನೆಯ ವಿವರ: ತನ್ನ ಕುಟುಂಬಸ್ಥ ಬಂಧುವೊಬ್ಬರ ಶ್ರದ್ಧಾಕ್ಕೆಂದು ಪುರಂದರ ಹಾಗೂ ಹೇಮಾವತಿ ಅವರು ತನ್ನ ಬೈಕ್‌ನಲ್ಲಿ ಬಂಟ್ವಾಳದಿಂದ ಪ್ರಯಾಣಿಸಿದವರು ಅಡ್ಡೂರಿನ ನೂಯಿ ಎಂಬಲ್ಲಿ ಬರುವಾಗ ಘಟನೆ ಸಂಬವಿಸಿದೆ. ಈ ವೇಳೆ ಬಿ.ಸಿ.ರೋಡ್ನಿಂದ ಕೈಕಂಬದತ್ತ ತೆರಳುತ್ತಿದ್ದ ಬಸ್ ನೂಯಿಯಲ್ಲಿ ನಿಂತಿತ್ತು. ಇದೇ ಸಂದರ್ಭ ರಭಸದಿಂದ ಬಸ್ನ ಹಿಂದೆ ಬರುತ್ತಿದ್ದ ಕಾರ್ ನಸ್‌ನಲ್ಲಿ ನಿಂತಿದ್ದ ಬೈಕ್‌ಗೆ ಗುದ್ದಿ ಬಳಿಕ ಬಸ್ಸನ್ನು ಓವರ್ಟೇಕ್ ಮಾಡಿಕೊಂಡು ಪರಾರಿಯಾಯಿತು ಎನ್ನಲಾಗಿದೆ.
ಕಾರ್ ಗುದ್ದಿದ ರಭಸಕ್ಕೆ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಎದುರಲ್ಲಿ ನಿಂತಿದ್ದ ಬಸ್ಗೆ ಗುದ್ದಿ ಕೆಳಗೆ ಬಿತ್ತೆನ್ನಲಾಗಿದೆ. ಈ ವೇಳೆ ಹಿಂಬದಿ ಸವಾರೆಯಾಗಿದ್ದ ಹೇಮಾವತಿ ಅವರು ನೆಲಕ್ಕೆ ಉರುಳಿದ ಪರಿಣಾಮ ತಲೆಗೆ ಗಂಭೀರವಾದ ಏಟು ಬಿತ್ತೆಂದು ಹೇಳಲಾಗಿದೆ. ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಹೇಮಾವತಿ ದಾರಿ ಮಧ್ಯೆ ಮೃತಪಟ್ಟಿದ್ದು, ಪುರಂದರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವಕ್ಕೆ ಕುತ್ತು ತಂದ ಹೆಲ್ಮೆಟ್ ಇಲ್ಲದ ಪ್ರಯಾಣ:
ಸಹಸವಾರೆಯಾಗಿದ್ದ ಹೇಮಾವತಿ ಅವರು ಹೆಲ್ಮೆಟನ್ನು ಶಿರಕ್ಕೆ ಧರಿಸದೆ ಕೈಯ್ಯಲ್ಲೇ ಇಟ್ಟುಕೊಂಡಿದ್ದರು. ಆದರೆ ಅಚಾನಕ್ಕಾಗಿ ಎದುರಾದ ದುರಂತದಿಂದ ಹೇಮಾವತಿ ಅವರು ತಲೆಗೆ ಹೆಲ್ಮೆಟ್ ಧರಿಸದ ಪರಿಣಾಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಬೈಕ್ನಿಂದ ಆಯತಪ್ಪಿ ಬಿದ್ದ ಅವರ ತಲೆಗೆ, ಮುಡಿಯಲ್ಲಿ ಸಿಕ್ಕಿಸಿಕೊಂಡಿದ್ದ ಕ್ಲಿಪ್(ಹೇರ್ಪಿನ್) ಬಲವಾಗಿ ತಲೆಗೆ ಚುಚ್ಚಿಕೊಂಡ ಪರಿಣಾಮ ಅಧಿಕ ರಕ್ತಸ್ರಾವದಿಂದ ಹೇಮಾವತಿ ಅವರು ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ಸರಕಾರ ಸಹಸವಾರರಿಗೂ ಹೆಲ್ಮೆಟ್ ಖಡ್ಡಾಯಗೊಳಿಸಿದ್ದರೂ ಅದನ್ನು ಕೈಯ್ಯಲ್ಲೇ ಇಟ್ಟುಕೊಂಡು ಪ್ರಯಾಣಿಸುವ ಪರಿಪಾಠ ಬೆಳೆಯುತ್ತಿದೆ. ಹೇಮಾವತಿ ಅವರೂ ಇದನ್ನೇ ರೂಢಿಸಿಕೊಂಡ ಪರಿಣಾಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ