ಮಂಗಳೂರು, ಫೆ ,19 : ಗಾಂಜಾ ಸೇವನೆಗೆ ಹಣ ಕೊಡುವಂತೆ ಪೀಡಿಸಿದ ದುಷ್ಕರ್ಮಿಗಳ ಗುಂಪೊಂದು ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋದಿಂದ ಈ ಘಟನೆ ಬಹಿರಂಗಗೊಂಡಿದೆ.
ವಿವಸ್ತ್ರಗೊಂಡ ಯುವಕ ಮಂಗಳೂರು ಕಾಲೇಜಿನಲ್ಲಿ ಓದುತ್ತಿದ್ದಾನೆ. ಈತ ಗಾಂಜಾ ಸೇವಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಆತನ ಸ್ನೇಹಿತನ ಸ್ನೇಹಿತರಾದ ಜೋಯಲ್, ಲಾಯ್, ಜಯಪ್ರಕಾಶ್, ವಿಕ್ಕಿ ಬಪ್ಪಾಲ್ ಅವರ ದ್ವೇಷದಿಂದ ಈ ಪಾಡು ಅನುಭವಿಸಿದ್ದಾನೆ.
ಘಟನೆಯ ವಿವರ: ಹಲ್ಲೆಗೆ ಒಳಗಾದ ಯುವಕ ಮಂಗಳೂರು ಕಾಲೇಜೊಂದರ ವಿದ್ಯಾರ್ಥಿ. ಈತನಿಗೆ ಕೆಲ ಸ್ನೇಹಿತರಿದ್ದಾರೆ. ಈ ಸ್ನೇಹಿತರಿಗೆ ಪರಿಚಿತವಾದ ಗುಂಪಿನಲ್ಲಿ ಜೋಯಲ್, ಲಾಯ್, ಜಯಪ್ರಕಾಶ್, ವಿಕ್ಕಿ ಬಪ್ಪಾಲ್ ಎಂಬ ಯುವಕರಿದ್ದರು. ಆದರೆ, ಇವರು ಗಾಂಜಾದ ದಾಸರಾಗಿದ್ದರಿಂದ ಸಂತ್ರಸ್ತ ಯುವಕ ಹಾಗೂ ಆತನ ಸ್ನೇಹಿತರು ಇವರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ. ಎರಡು ವಾರಗಳ ಹಿಂದೆ ಸುಲ್ತಾನ್ ಬತ್ತೇರಿಯಲ್ಲಿ ವಿವಸ್ತ್ರಗೊಂಡ ಯುವಕ ಹಾಗೂ ಆತನ ಸ್ನೇಹಿತರಿಗೆ ಜೋಯಲ್ ಗುಂಪು ಮುಖಾಮುಖಿಯಾಗಿದೆ.
ಮುಖಾಮುಖಿಯಾದ ಜೋಯಲ್ ಗುಂಪಿನವರು ಗಾಂಜಾ ಸೇವಿಸಲು ದುಡ್ಡು ಕೊಡುವಂತೆ ಪೀಡಿಸಿದ್ದು, ಹಲ್ಲೆ ಮಾಡಿದ್ದಾರೆ. ಘಟನೆ ನಡೆದ ಎರಡು ದಿನಗಳ ಬಳಿಕ ನಗರದ ಕೇಂದ್ರೀಯ ವಿದ್ಯಾಲಯದ ಮುಂದೆ ಬೈಕಿನಲ್ಲಿ ಹೋಗುತ್ತಿದ್ದ ಯುವಕನ ಅಪಹರಿಸಿ ರಿಕ್ಷಾದಲ್ಲಿ ಸುಲ್ತಾನ್ ಬತ್ತೇರಿಗೆ ಕರೆತಂದಿದ್ದಾರೆ.
ಅಲ್ಲಿ ಆತನಿಗೆ ಚಾಕು ತೋರಿಸಿ, ಮರದ ದೊಣ್ಣೆಗಳಿಂದ ಹಲ್ಲೆ ಮಾಡಿ ವಿವಸ್ತ್ರಗೊಳಿಸಿದ್ದಾರೆ. ಅಲ್ಲದೆ ಆತನಲ್ಲಿದ್ದ ಐದು ಸಾವಿರ ರೂ. ಹಾಗೂ ಎಂಟು ಸಾವಿರ ರೂ. ಮೌಲ್ಯದ ನೋಕಿಯಾ ಮೊಬೈಲ್ ಕಸಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಲ್ಲಿ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ. ಮಾನಸಿಕವಾಗಿ ಜರ್ಜರಿತನಾದ ಈತ ಕೊನೆಗೂ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.