ಮಂಗಳೂರು, ಫೆ. 19: ರಾಜ್ಯ ಸರ್ಕಾರದ ‘ಹೊಸ ಬೆಳಕು’ ಯೋಜನೆ ಮೆಸ್ಕಾಂ ಮೂಲಕ ಎಲ್ಇಡಿ ಬಲ್ಬುಗಳು ಮಂಗಳೂರು ತಲುಪಿವೆ. ಬರೇ 10 ದಿನದಲ್ಲಿ ಇಲ್ಲಿನ 11 ಕೇಂದ್ರಗಳಲ್ಲಿ 20,000 ಬಲ್ಬುಗಳು ಗ್ರಾಹಕರಿಗೆ ವಿತರಣೆಯಾಗಿವೆ. ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಈ ಯೋಜನೆ ಮಹತ್ವದ್ದಾಗಿದೆ.
ರಾಜ್ಯದ ಪ್ರತಿಯೊಂದು ಮನೆಗೆ ಎಸ್ಕಾಂ ಮೂಲಕ 100 ರೂ ಗೆ 9ವೋಲ್ಟ್ ಬಲ್ಬ್ ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 14 ಲಕ್ಷ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿದ್ದು, ಎಲ್ಲರಿಗೂ ಎಲ್ಇಡಿ ಬಲ್ಬು ಸಿಗಲಿದೆ.
ಎರಡು ಕಿಲೋ ವ್ಯಾಟ್ ವಿದ್ಯುತ್ ಬಳಕೆದಾರರಿಗೆ 5 ಎಲ್ಇಡಿ ಬಲ್ಬು ಹಾಗೂ 5 ಮತ್ತು ಅದಕ್ಕಿಂತ ಹೆಚ್ಚು ಕಿಲೋ ವ್ಯಾಟ್ ವಿದ್ಯುತ್ ಬಳಸುವ ಗ್ರಾಹಕರಿಗೆ 10 ಬಲ್ಬು ಖದೀದಿಗೆ ಅವಕಾಶವಿದೆ.
ಮಂಗಳೂರಿನ 11 ಕೇಂದ್ರಗಳಲ್ಲಿ ಬಲ್ಬ್ ವಿತರಣೆಯಾಗುತ್ತಿದೆ. ಗ್ರಾಹಕರು ತಮ್ಮ ಮೆಸ್ಕಾಂ ಬಿಲ್ಲಿನ ಜೊತೆಗೆ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಬಲ್ಬ್ ಪಡೆದುಕೊಳ್ಳಬಹುದು. ಇದಕ್ಕೆ ಮೂರು ವರ್ಷಗಳ ಗ್ಯಾರಂಟಿ ಇದೆ. ಗ್ಯಾರಂಟಿ ಅವಧಿಯಲ್ಲಿ ಬಲ್ಬ್ ಕೆಟ್ಟು ಹೋದಲ್ಲಿ ಬಲ್ಬ್ ವಿತರಣಾ ಕಂಪೆನಿಯೇ ಹೊಸ ಬಲ್ಬ್ ಒದಗಿಸಲಿದೆ. ಯೋಜನೆಗಾಗಿ ಎನರ್ಜಿ ಎಫೀಸಿಯೆನ್ಸಿ ಸರ್ವಿಸ್ ಲಿಮಿಟೆಡ್ ಎಲ್ಇಡಿ ಬಲ್ಬ್ ನೀಡುತ್ತದೆ. ಈ ಕಂಪೆನಿ ಸರ್ಕಾರದ ಪ್ರಾಯೋಜಕತ್ವ ಪಡೆದುಕೊಂಡಿದೆ.
ಎಲ್ಇಡಿ ಬಲ್ಬುಗಳು ಒಂದು ಮಿಲಿಯನ್ ಗಂಟೆಯವರೆಗೆ ಬೆಳಕು ನೀಡುತ್ತವೆ. 11 ತಿಂಗಳು ಪೂರ್ಣ ಬೆಳಕು ನೀಡಿದರೆ ಮುಂದಿನ 22 ತಿಂಗಳು ಮಂದ ಬೆಳಕು ನೀಡಲಿವೆ. ದಿನಕ್ಕೆ 8 ಗಂಟೆ ಉರಿದರೂ ಕೆಲವು ವರ್ಷ ಈ ಬಲ್ಬುಗಳಿಗೆ ಬಾಳಿಕೆ ಇದೆ.
ಗ್ರಾಹಕರು ಪ್ರತಿ ಬಲ್ಬುಗಳಿಗೆ 100 ರೂ ನೀಡಿ ಮೆಸ್ಕಾಂ ಕಚೇರಿಗಳಿಂದ ಬಲ್ಬ್ ಪಡೆಯಬಹುದು. 10ರೂ ಡೌನ್ ಪೇಮೆಂಟ್ ಮಾಡಿ ಬಲ್ಬ್ ಖರೀದಿಸಿ ಉಳಿದ ಹಣ 9 ತಿಂಗಳಲ್ಲಿ ವಿದ್ಯುತ್ ಬಿಲ್ಲಿನೊಂದಿಗೆ ಹೊಂದಾಣಿಕೆ ಅವಕಾಶವಿದೆ. ಆದರೆ ಈಗ ಮೆಸ್ಕಾಂನಲ್ಲಿ ಕಂತಿನ ವ್ಯವಸ್ಥೆ ಜಾರಿಗೆ ಬಂದಿಲ್ಲ. ಕೆಲವು ದಿನಗಳ ಮೇಲೆ ಇಲ್ಲಿ ಕಂತಿನಲ್ಲಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಮಂಗಳೂರಿನ ಅತ್ತಾವರ, ಮಣ್ಣಗುಡ್ಡೆ, ನೆಹರೂ ನಗರ, ಉಳ್ಳಾಲ, ಸುರತ್ಕಲ್, ಜೆಪ್ಪು, ಕಾವೂರು ಸಹಿತ ಒಟ್ಟು 11 ಮೆಸ್ಕಾಂ ಕೇಂದ್ರಗಳಲ್ಲಿ ಎಲ್ಇಡಿ ಬಲ್ಬುಗಳು ಲಭ್ಯವಿವೆ. ತಿಂಗಳಾಂತ್ಯಕ್ಕೆ ಎಲ್ಲ ಕಡೆ ಗ್ರಾಹಕರಿಗೆ ಈ ಯೋಜನೆ ಕೈಗೆಟಕಲಿದೆ.