ಮಂಗಳೂರು,ಫೆ.22: ದ.ಕ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ಯಾವುದೇ ಹಣ, ಸಾಮಗ್ರಿ, ಮದ್ಯ ವಶಪಡಿಸುವಂತಹ ಪ್ರಮೇಯ ಬರಲಿಲ್ಲ. ಮತದಾರರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ನೀಡಿದ ಸಹಕಾರದಿಂದ ಉತ್ತಮ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದರು.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 10,06,212 ಮತದಾರರಲ್ಲಿ 7,34,575 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 3,62,254 ಪುರುಷ ಮತ್ತು 3,72,321 ಮಹಿಳಾ ಮತದಾರರು ಮತ ಚಲಾಯಿಸುವುದರೊಂದಿಗೆ ಜಿಲ್ಲೆಯಲ್ಲಿ ಶೇ. 69.16 ಮತದಾನವಾಗಿದೆ. ಶೇ.69ರಷ್ಟು ಮಹಿಳೆಯರು ಮತ್ತು ಶೇ.68ರಷ್ಟು ಪುರುಷರು ಮತ ಚಲಾಯಿಸಿದ್ದಾರೆ ಎಂದು ನುಡಿದರು. ತಾಪಂ ಕ್ಷೇತ್ರದ 17 ಮತ್ತು ಜಿಪಂ ಕ್ಷೇತ್ರದ 10 ಮತಯಂತ್ರಗಳ ಸಹಿತ ಜಿಲ್ಲೆಯಲ್ಲಿ ಒಟ್ಟು 17 ಮತಯಂತ್ರಗಳಲ್ಲಿ ದೋಷ ಕಂಡುಬಂದ ಪರಿಣಾಮ ಅದನ್ನು ಬದಲಾಯಿಸಿ ಬೇರೆ ಮತಯಂತ್ರಗಳನ್ನು ನೀಡಲಾಗಿದೆ ಎಂದು ಹೇಳಿದರು.
11 ಕಂಟ್ರೋಲ್ ಯುನಿಟ್ ಬದಲಾಯಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ 6,500 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರಲ್ಲಿ 28 ಮಂದಿ ವಿವಿಧ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗಲು ವಿನಾಯಿತಿ ಕೇಳಿದ್ದರು. ಅವರ ಬದಲಿಗೆ ಬೇರೆ ಸಿಬ್ಬಂದಿಯನ್ನು ನೇಮಿಸಲಾಗಿದೆ.
2010ರಲ್ಲಿ ನಡೆದ ಜಿಪಂ, ತಾಪಂ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.2ರಷ್ಟು ಏರಿಕೆಯಾಗಿದೆ. 2010ರಲ್ಲಿ ನಡೆದ ಜಿಪಂ, ತಾಪಂ ಚುನಾವಣೆಯಲ್ಲಿ ಶೇ.67ರಷ್ಟು ಮತ ಚಲಾವಣೆಯಾಗಿತ್ತು, 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.74, 2014ರ ಲೋಕಸಭಾ ಚುನಾವಣೆಯಲ್ಲಿ ಶೇ.77, 2015ರ ಗ್ರಾಪಂ ಚುನಾವಣೆಯಲ್ಲಿ ಶೇ.72 ಮತದಾನವಾಗಿತ್ತು. ಈ ಬಾರಿ ಶೇ. 69.16 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.