ಮಂಗಳೂರು,ಫೆ.25 : ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಆಶಾದಾಯಕವಾಗಿಯೇ ಇದೆ. ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ ಪಕ್ಷ ಅಧಿಕಾರದ ಮದ ಪ್ರದರ್ಶಿಸಿದರೆ ಮುಂಬರುವ ಚುನಾವಣೆಯಲ್ಲಿ ಖಂಡಿತಾ ಕಷ್ಟ ಎದುರಾಗಲಿದೆ. ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಗಮನ ಕೊಡಬೇಕು ಹಾಗೂ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಅತಿಯಾದ ಆತ್ಮ ವಿಶ್ವಾಸ ಸಲ್ಲದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಿಗೆ ಅಧಿಕಾರ ನೀಡುತ್ತೀರಿ, ಆದರೆ ಕಾರ್ಯಕರ್ತರಿಗೆ ಯಾಕೆ ನೀಡುತ್ತಿಲ್ಲ. ಚುನಾಯಿತರೆಲ್ಲರಿಗೂ ಅಧಿಕಾರ ನೀಡಿದ್ದೀರಿ. ಆದರೆ ಕಾರ್ಯಕರ್ತರಿಗೇನೂ ಕೊಟ್ಟಿಲ್ಲ. ಕೆಲಸ ಮಾಡುವುದು ಕಾರ್ಯಕರ್ತರು. ಪೆಟ್ಟು ತಿನ್ನುವುದೂ ಅವರೇ. ಕೆಲವರು ಪ್ರಾಣ ಕೂಡ ಕೊಟ್ಟಿದ್ದಾರೆ. ಕಾರ್ಯಕತರು ಇಲ್ಲದಿರುತ್ತಿದ್ದರೆ ಚುನಾವಣೆಯಲ್ಲಿ ಈ ಫಲಿತಾಂಶ ಬರುತ್ತಿತ್ತೇ? ನಿಗಮ, ಮಂಡಳಿಗಳಿಗೆ ನೇಮಕ ಮಾಡಲು ಇನ್ನೆಷ್ಟು ದಿನ ಕಾಯುವುದು? ನಿಗಮ ಮಂಡಳಿಗಳಿಗೆ ಕಾರ್ಯಕರ್ತರನ್ನು ನೇಮಕಗೊಳಿಸಲು ಇನ್ನೂ ವಿಳಂಬ ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆಯಿತು. ನಿಗಮ ಮಂಡಳಿಗಳಿಗೆ ಇನ್ನಾದರೂ ನೇಮಕಗೊಳಿಸದಿದ್ದರೆ ಕಾರ್ಯಕರ್ತರೇ ಬುದ್ಧಿ ಕಲಿಸಬೇಕೆಂದು ಕಾಯುತ್ತಿದ್ದೀರಾ? ಕಾರ್ಯಕರ್ತರಿಗೆ ಶಕ್ತಿ ತುಂಬಿಸಿದರೆ, ನಿಮಗೆ ಶಕ್ತಿ ಬಂದಂತೆ. ಪಕ್ಷ ಸಂಘಟನೆಯ ಎಲ್ಲ ಕೆಲಸವನ್ನೂ ಕಾರ್ಯಕರ್ತರೇ ಮಾಡುತ್ತಿರುವಾಗ ಅವರಿಗೆ ನಿಗಮ ಮಂಡಳಿಯನ್ನು ಕೊಟ್ಟರೆ ಏನು ತಪ್ಪು? ಇನ್ನೂ ವಿಳಂಬ ಮಾಡುತ್ತಿರುವುದು ನ್ಯಾಯವೇ. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಗಮ, ಮಂಡಳಿಗಳಿಗೆ ಕೂಡಲೇ ನೇಮಕ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಎರಡು ದಿನಗಳಲ್ಲಿ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಬಹುದು ಎಂದರು.
ದ.ಕ. ಜಿ.ಪಂ. ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದರೂ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ತಾ.ಪಂ. ಚುನಾವಣೆಯಲ್ಲಿ ಸಾಧನೆ ಉತ್ತಮವಾಗಿದ್ದರೂ ಕುಣಿದು ಕುಪ್ಪಳಿಸುವಂತಹ ಪರಿಸ್ಥಿತಿ ಇಲ್ಲ ಎಂದ ಅವರು, ಜಿಲ್ಲೆಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಇದುವರೆಗೆ ಅವರೆಲ್ಲರೂ ಒಂದು ಕಡೆ ಕುಳಿತು ಚರ್ಚಿಸಿರುವುದು ಕಂಡುಬಂದಿಲ್ಲ. ಅವರಲ್ಲಿ ಸಮನ್ವಯದ ಕೊರತೆ ಇದೆಯೇ ಎಂದು ಭಾಸವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಂತಮ್ಮ ಜಿಲ್ಲೆಗಳಲ್ಲಿ ತಮ್ಮ ಪಕ್ಷದ ಶಾಸಕರ ಜತೆ ಸಮಾಲೋಚನೆ ನಡೆಸಿ ಸಮಗ್ರ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ಪೂಜಾರಿ ನೀಡಿದರು.
ಕೆಲವು ಮಂದಿ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಆದರೆ ಸಾಕು ಎಂಬ ಭಾವನೆ ಹೊಂದಿದ್ದಾರೆ. ಇದು ಸರಿಯಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಗಮನ ಹರಿಸದಿದ್ದರೆ ಜನರು ಕ್ಷಮಿಸಲಾರರು.ಸುಳ್ಯ ತಾಲೂಕಿನಲ್ಲಿ ಪಕ್ಷದ ಸಾಧನೆ ಬಹಳ ಕೆಟ್ಟದಾಗಿದೆ. ಕಳೆದ ಕೆಲವು ಚುನಾವಣೆಗಳಲ್ಲಿ ಅಲ್ಲಿನ ಫಲಿತಾಂಶ ಆಶಾದಾಯಕವಾಗಿಲ್ಲ. ಉಸ್ತುವಾರಿ ಸಚಿವರು ಮತ್ತು ಇತರ ಶಾಸಕರು ಅಲ್ಲಿಗೆ ತೆರಳಿ ಜನರ ಸಮಸ್ಯೆ ಪರಿಹರಿಸಬೇಕು. ತಮ್ಮ ಕ್ಷೇತ್ರವನ್ನು ಮಾತ್ರ ನೋಡಿದರೆ ಸಾಲದು.ಅಧಿಕಾರದಲ್ಲಿರುವಾಗ ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಸರ್ವಾಧಿಕಾರಿ ನೀತಿ ಸರಿಯಲ್ಲ; ಅಂತಹ ಭಾವನೆ ಬಿಟ್ಟು ಬಿಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಸಚಿವರು ಮತ್ತು ಶಾಸಕರು 9/11 ಸಮಸ್ಯೆ, ಕುಮ್ಕಿ ಹಕ್ಕು, ಎತ್ತಿನ ಹೊಳೆ ಯೋಜನೆ, ಮೂಲಗೇಣಿ ಸಮಸ್ಯೆ ಇತ್ಯಾದಿಗಳಿಗೆ ಅಗತ್ಯವಾಗಿ ಸ್ಪಂದಿಸಬೇಕು. ಇದಕ್ಕೆ ಪ್ರತಿಭಟನೆ ಕಿಚ್ಚು ಹಚ್ಚುವ ತನಕವೂ ಕಾಯ ಬೇಕೇ? ಇನ್ನೂ ಪಾಠ ಕಲಿತಿಲ್ಲವೇ? ಭರವಸೆಗಳನ್ನು ಪ್ರಣಾಳಿಕೆಗಳಲ್ಲಿ ಮಾತ್ರ ಕೊಟ್ಟರೆ ಸಾಕೇ ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.
ಪಾಲಿಕೆ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಪಾಲಿಕೆ ಸದಸೈ ಅಪ್ಪಿ, ಕಾಂಗ್ರೆಸ್ ಮುಖಂದರಾದ ಮಹಾಬಲ ಮಾರ್ಲ, ಅರುಣ್ ಕುವೆಲ್ಲೊ, ಟಿ.ಕೆ. ಸುಧೀರ್, ಮೋಹನ್ ಮೆಂಡನ್, ಉಮೇಶ್ಚಂದ್ರ, ಕರುಣಾಕರ ಶೆಟ್ಟಿ, ನೀರಜ್ ಪಾಲ್, ಅಬ್ದುಲ್ ಸಲೀಂ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.