ಮಂಗಳೂರು, ಮಾ. 3: ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿದೆ. ಆರೋಪಿಯನ್ನು ಬಜಾಲ್ ಪಕ್ಕಲ್ಲಡ್ಕದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಭಾಷಾ ಶಿಕ್ಷಕ ಮೋಹನ್ ರೈ ಡಿ. ಎಂದು ಗುರುತಿಸಲಾಗಿದೆ.
ಆರೋಪಿ ಬಜಾಲ್ ಪಕ್ಕಲ್ಲಡ್ಕದ ಖಾಸಗಿ ಶಾಲೆಯ ಒಂಬತ್ತನೆ ತರಗತಿಯಲ್ಲಿ ಕಲಿಯುತ್ತಿರುವ 14 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಶಿಕ್ಷಕ ಒಂಭತ್ತನೆ ತರಗತಿಯ ವಿದ್ಯಾರ್ಥಿನಿಯೊಂದಿಗೆ ಮೊಬೈಲ್, ಫೇಸ್‌ಬುಕ್, ವಾಟ್ಸಪ್‌ನಲ್ಲಿ ಅಶ್ಲೀಲ ಪದಗಳಿಂದ ಸಂಭಾಷಣೆ ನಡೆಸಿದ್ದಾನೆ. ಅಲ್ಲದೆ ಬಾಲಕಿಯನ್ನು ಪುಸಲಾಯಿಸಿ ಸಿಟಿ ಸೆಂಟರ್, ಐಸ್ ಕ್ರೀಂ ಪಾರ್ಲರ್, ಚಿತ್ರ ಮಂದಿರಗಳಿಗೆ ಕರೆದೊಯ್ದು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಆಕೆಯ ಗೆಳತಿಯರಿಂದ ವಿಷಯ ತಿಳಿದು ಬಂದಿದ್ದು, ವಿದ್ಯಾರ್ಥಿನಿಯನ್ನು ಕೌನ್ಸೆಲಿಂಗ್ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಸಂತ್ರಸ್ತೆ ಮತ್ತು ಆಕೆಯ ಸಹಪಾಠಿಗಳು ಲಿಖಿತ ದೂರು ನೀಡಿದ್ದು, ಆರೋಪಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ಶಿಕ್ಷಕನನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ಇದರಿಂದ ಆಕ್ರೋಶಗೊಂಡ ಶಿಕ್ಷಕ ಮುಖ್ಯೋಪಾಧ್ಯಾಯಿನಿ ಸಿ. ಲಿನೆಟ್ ಸಿಕ್ವೇರಾ ಅವರಿಗೆ ಜೀವ ಬೆದರಿಕೆವೊಡ್ಡಿದ್ದಾನೆ ಎನ್ನಲಾಗಿದೆ.