ಮಂಗಳೂರು, ಮಾ.3: ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಸಾಧ್ಯವಾದರೆ ಗುಣಪಡಿಸಲು ಸಾಧ್ಯ ಎಂದು ರೋಟರಿ ಜಿಲ್ಲೆ 3180ರ ಗವರ್ನರ್ ಡಾ.ಭರತೇಶ್ ಅದಿರಾಜ್ ಹೇಳಿದರು.
ಅವರು ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ರೋಟರಿ ಜಿಲ್ಲೆ-3180ರ ಜಂಟಿ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕ್ಯಾನ್ಸರ್ ವಿರುದ್ಧ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಗರದ ಎ.ಜೆ.ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಲಾದ ಪ್ರಥಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ರೋಗದ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಸಲು ಎ.ಜೆ. ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಜೊತೆ ರೋಟರಿ ಸಂಸ್ಥೆ ಕೂಡ ಕೈಜೋಡಿಸಿದ್ದು, ಪ್ರತಿಯೊಬ್ಬರೂ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಡಾ.ಭರತೇಶ್ ಅದಿರಾಜ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಮಾತನಾಡಿ, ಪ್ರತಿವರ್ಷ ಸುಮಾರು ಒಂಬತ್ತು ಲಕ್ಷ ಮಂದಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಾರೆ. ಈ ಪೈಕಿ ಶೇ.4ರಿಂದ 5ರಷ್ಟು ಮಂದಿ ಸಾವನ್ನಪ್ಪುತ್ತಾರೆ. ಕಡಿಮೆ ವೆಚ್ಚದಲ್ಲಿ ಈ ರೋಗವನ್ನು ಆರಂಭಿಕ ಹಂತದಲ್ಲಿ ಗುಣಪಡಿಸಬಹದಾಗಿದೆ ಎಂದು ತಿಳಿಸಿದರು.
ಎ.ಜೆ. ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಕಮಲಾಕ್ಷ ಕೆ. ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಸ್ವಾಗತಿಸಿದರು. ಡಾ.ನವೀನ್ ರೋಡ್ರಿಗಸ್ ವಂದಿಸಿದರು.