ಮ೦ಗಳೂರು ಮಾ,11: ದೇಶದ ಆರ್ಥಿಕತೆ ಬೆಳವಣಿಗೆಗೆ ಮಹಿಳೆಯರು ಸಹ ಉದ್ದಿಮೆಗಳನ್ನು ಆರಂಭಿಸುವುದು. ಸ್ಥಳೀಯವಾಗಿ ದೊರಕುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡಿ ತಮ್ಮ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ತನ್ನ ಹಳ್ಳಿ, ಜಿಲ್ಲೆ, ರಾಜ್ಯ ಹಾಗೇ ರಾಷ್ಟ್ರದ ಅಭ್ಯುದಯಕ್ಕೂ ಮುಂದಾಗಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಹಿಳೆಯರಿಗೆ ಕರೆ ನೀಡಿದ್ದಾರೆ.
ಅವರು ಇಂದು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಮಂಗಳೂರು ಹಾಗೂ ರಾಷ್ಟ್ರೀ ಹೈನು ಯೋಜನೆ ಹಂತ-1 ರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಂದಿನಿ ಸ್ವಸಹಾಯ ಸಂಘಗಳ ಪುನಃಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಕೇವಲ ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳನ್ನಲ್ಲದೆ ಸ್ಥಳೀಯವಾಗಿ ಸುಲಭದಲ್ಲಿ ದೊರಕುವ ಸಂಪನ್ಮೂಲಗಳನ್ನೆ ಬಳಸಿ ಉಪಯುಕ್ತವಾದ ವಸ್ತುಗಳನ್ನು ಉತ್ಪಾದಿಸುವ ಮೂಲಕ ತಮ್ಮ ಸಂಘಗಳ ಆದಾಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ತಲಾ ಆದಾಯವನ್ನೂ ವೃದ್ಧಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಬಾರ್ಡ್ ಎ.ಜಿ.ಎಮ್. ಪ್ರಸಾದ್ ರಾವ್ ಅವರು ಮಾತನಾಡಿ ನಬಾರ್ಡ್ ಕಳೆದ 25 ವರ್ಷಗಳ ಹಿಂದೆ ಮಹಿಳೆಯರಲ್ಲಿ ಉಳಿತಾಯ ಮನೋಭಾವ ಮೂಡಿಸಿದ ಕಾರಣ ಇಂದು ಸ್ವಸಹಾಹಾಯ ಸಂಘಗಳಲ್ಲಿ ಮಹಿಳೆಯರು ಕೋಟಿಗಟ್ಟಲೆ ಹಣವನ್ನು ಉಳಿತಾಯ ಮಾಡಿರುವುದಲ್ಲದೆ ತಮ್ಮದೇ ಆದ ಸ್ವಂತ ಬಂಡವಾಳದಿಂದ ಆರ್ಥಕ ಚಟುವಟಿಕೆಗಳನ್ನು ಆರಂಭಿಸಿ ಯಾರಿಗೆನು ಕಡಿಮೆಯಿಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಎಂದ ಪ್ರಸಾದ್ ಸ್ವಸಹಾಯ ಸಂಘಗಳ ಸದಸ್ಯರು ಅಡಿಕೆ ಹಾಳೆಯಿಂದ ತಟ್ಟೆ, ಐಸ್ಕ್ರೀಮ್ ಕಪ್ಗಳನ್ನು ಉತ್ಪಾದಿಸಿ ನಂತರ ಉಳಿಯುವ ಅಡಿಕೆ ಹಾಳೆಯ ತ್ಯಾಜ್ಯದಿಂದ ಪಶುಗಳ ಆಹಾರವನ್ನು ತಯಾರಿಸಿ ಇನ್ನೂ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ಅವರು ವಹಿಸಿದ್ದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿವಿಸತ್ಯನಾರಾಯಣ, ಸಹಕಾರ ಸಂಘಗಳ ಉಪನಿಬಂದಕರಾದ ಸಲೀಮ್, ಮುಂತಾದವರು ಹಾಜರಿದ್ದರು.