ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಭಾರತ ನನ್ನ ಇನ್ನೊಂದು ತವರು ಮನೆ. ಭಾರತದ ಸಂಸ್ಕ್ರತಿ, ಆಚಾರ ವಿಚಾರಗಳನ್ನು ತಿಳಿದಷ್ಟಕ್ಕೂ ಸಾಲದು. ಇಲ್ಲಿಗೆ ಬಂದ ಮೇಲೆ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದಿದ್ದೇನೆ. ಕಳೆದ ವರ್ಷ ಬಂದಾಗ ಯೋಜನೆ ರೂಪಿಸಿದ್ದೆ, ಅದುವೇ ‘ಬದಲಾವಣೆಗಾಗಿ ನಡೆದಾಟ’. ಈ ನಡೆದಾಟದ ಮೂಲಕ ಪ್ರಪಂಚದ ಇನ್ನೊಂದೆಡೆಯ ವಿದ್ಯಮಾನಗಳನ್ನು ಅರಿಯುವುದು, ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಜನರಿಗೆ ತಿಳುವಳಿಕೆ ಇನ್ನೂ ಆಗಬೇಕಿದೆ. ಆ ಬಗ್ಗೆ ದಿ ಕನ್ಸರ್ರ್‍ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕೆಲಸವನ್ನು ಜನರಿಗೆ ಪರಿಚಯಿಸುವುದು ಈ ಬದಲಾವಣೆಗಾಗಿ ನಡೆದಾಟದ ಉದ್ದೇಶ- ಎಂದು ಹೇಳಿದ್ದು ಕ್ಷತಿಲ್ ಉತ್ನೆ.
ಯಾರಿವರು ಕ್ಷತಿಲ್ ಉತ್ನೆ..?
ಕ್ಷತಿಲ್ ಉತ್ನೆ ಅವರು ನಾರ್ವೆ ದೇಶದ ಟ್ರ್ಯಾಂಡ್ ಹ್ಯಾಂ ನಗರದ ಪುರಸಭಾ ಸದಸ್ಯ. ಹವ್ಯಾಸಿ ಪತ್ರಕರ್ತರಾಗಿರುವ ಉತ್ನೆ ಅವರಿಗೆ ಕಳೆದ ಹಲವಾರು ವರ್ಷಗಳಿಂದ ದಿ ಕನ್ಸರ್ನ್ಡ್ ಫಾರ್ ಚಿಲ್ಡ್ರನ್ ಸಂಸ್ಥೆಯನ್ನು ಬಲ್ಲವರಾಗಿದ್ದಾರೆ. ಇಲ್ಲಿ ಮಕ್ಕಳ ಭಾಗವಹಿಸುವಿಕೆಯ ಹಕ್ಕಿನ ಬಗ್ಗೆ ಮಾಡುತ್ತಿರುವ ಕೆಲಸಗಳನ್ನು ಅತ್ಯಂತ ಸಮೀಪದಿಂದ ನೋಡುತ್ತಾ ಬಂದಿರುವ ಇವರು ಪ್ರತಿ ವರ್ಷಕ್ಕೊಮ್ಮೆ ದಕ್ಷಿಣ ಏಷ್ಯಾಕ್ಕೆ ಬಂದು ಭಾರತ ಹಾಗೂ ಸುತ್ತ ಮುತ್ತಲಿನ ದೇಶಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಆಗುತ್ತಿರುವುದನ್ನು ಗಮನಿಸುತ್ತಿದ್ದಾರೆ. ದಿ ಕನ್ಸರ್ರ್‍ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆ ಹಾಗೂ ಕುಂದಾಪುರದ ಮಕ್ಕಳ ಸಂಘಟನೆಯನ್ನು ತಮ್ಮ ನಗರವಾದ ನಾರ್ವೆಗೆ ಆಹ್ವಾನಿಸಿ ಅಲ್ಲಿರುವ ಯೂತ್ ಕೌನ್ಸಿಲ್ ಸದಸ್ಯರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ನಡೆಸಿದವರು.
ಮೂವರು ಫ್ರೆಂಡ್ಸ್ ಜೊತೆ ಪಾದಯಾತ್ರೆ!
ಹೀಗೆ ಕಳೆದ ಬಾರಿ ನಿರ್ಣಯಿಸಿದಂತೆ ಮಕ್ಕಳ ಹಕ್ಕಿನ ಜಾಗ್ರತಿ ಅರಿವು ಮೂಡಿಸುವ ಸಲುವಾಗಿ ಕುಂದಾಪುರದ ಹಟ್ಟಿಯಂಗಡಿ ನಮ್ಮಭೂಮಿ ಸಂಸ್ಥೆಯಿಂದ ಬೆಂಗಳುರು ತನಕ 450ಕ್ಕೂ ಅಧಿಕ ಕಿಲೋಮೀಟರ್ ನಡೆದು ಸಾಗುವ ‘ಬದಲಾವಣೆಗಾಗಿ ನಡೆದಾಟ’ವನ್ನು ಆರಂಭಿಸಿದ್ದಾರೆ. ಇದಕ್ಕೆ ಅವರ ಮೂವರು ಸ್ನೇಹಿತರು ಸಾಥ್ ನೀಡುತ್ತಿದ್ದು ಈ ತಿಂಗಳ ಅಂತ್ಯದೊಳಗೆ ಬೆಂಗಳುರು ತಲುಪುವ ಗುರಿಯನ್ನು ಹೊಂದಿದ್ದಾರೆ. ಈ ತಂಡದ ಜೊತೆ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯವರು ಈ ನಡೆದಾಟದುದ್ದಕ್ಕೂ ಜೊತೆಗಿರಲಿದ್ದಾರೆ.
ಮೂವರು ಸ್ನೇಹಿತರು ಯಾರ್‍ಯಾರು?
ಡೇವಿಡ್- ಮಾನಸಿಕವಾಗಿ ಅನಾರೋಗ್ಯ ಇರುವ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಬಳಲುತ್ತಿರುವ ಯುವ ಜನರ ಜೊತೆ ಕೆಲಸ ಮಾಡುತ್ತಿರುವವರು. ವಾಂಖೆ- ಟ್ರ್ಯಾಂಡ್ ಹ್ಯಾಂ ನಗರದ ಶಾಲೆಯೊಂದರಲ್ಲಿ ಮಕ್ಕಳ ಜೊತೆ ಕೆಲಸ ಮಾಡುತ್ತಿರುವವರು.
ಬಿಯಾಟೆ- ಟ್ರ್ಯಾಂಡ್ ಹ್ಯಾಂ ನಗರದಲ್ಲಿ ಯುವ ಜನರ ಜೊತೆ ಕೆಲಸ ಮಾಡುವವರು.
ಪಯಣ ಹೇಗೆ ಗೊತ್ತಾ?
ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿಯವರು ದಂದಯಾತ್ರೆ ಮಾಡಿದ ದಿನವಾದ ಮಾ.11ರ ಸ್ಮರಣೆ ಮಾಡುವ ಕ್ಷತಿಲ್ ಉತ್ನೆ ಈ ದಿನವನ್ನೇ ತನ್ನ ನಡೆದಾಟದ ಆರಂಭಿಕ ದಿನವನ್ನಾಗಿಸಿಕೊಂಡರು. ಮೊದಲ ಮೂರು ದಿನ ನಮ್ಮ ಭೂಮಿ ಸುತ್ತಮುತ್ತ ನಡೆದಾಟ ನಡೆಸುವ ಈ ತಂಡ ಉಳಿದೆರಡು ದಿನಗಳ ಕಾಲ ಕುಂದಾಪುರದ ಆಲೂರು, ಕುಂಭಾಸಿ ಮೊದಲಾದೆಡೆ ತಿರುಗಾಟ ನಡೆಸಲಿದ್ದಾರೆ. ಬಳಿಕ ಮಾ.14 ರಂದು ಸೋಮವಾರ ಬೆಂಗಳೂರಿನ ಕಡೆಗೆ ನಡೆದಾಟವನ್ನು ಆರಂಭಿಸಲಿದ್ದು ಸಿದ್ದಾಪುರ, ಹೊಸಂಗಡಿ, ಮಾಸ್ತಿಕಟ್ಟೆ, ನಗರ, ಹೊಸನಗರ, ಶಿವಮೊಗ್ಗ, ಚೆನ್ನಗಿರಿ, ಹೊಸದುರ್ಗ ಶಿರಾ ತುಮಕೂರು ಮಾರ್ಗವಾಗಿ ಬೆಂಗಳೂರನ್ನು ಎಪ್ರಿಲ್ 30 ರಂದು ತಲುಪುವ ಉದ್ದೇಶ ಹೊಂದಿದ್ದಾರೆ.
ಪಯಣದ ನಡುವೆ…….
ಮಾರ್ಗದುದ್ದಕ್ಕೂ ರೋಟರಿ ಲಯನ್ಸ್ ಮುಂತಾದ ಸಂಘ ಸಂಸ್ಥೆಗಳು ಈ ತಂಡದೊಂದಿಗೆ ಸೇರಿ ಆಯಾ ಪ್ರದೇಶದ ಬಗ್ಗೆ ಹಾಗೂ ನಾರ್ವೆಯಲ್ಲಿನ ಪರಿಸ್ಥಿತಿಗಳ ಬಗ್ಗೆ ಸಂವಾದ ನಡೆಸುತ್ತಾರೆ. ಈ ತಂಡದ ಜೊತೆ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯವರು ಈ ನಡೆದಾಟದುದ್ದಕ್ಕೂ ಇರುತ್ತಾರೆ. ಈ ನಡೆದಾಟದ ತಂಡ ಹೋದ ಕಡೆಗಳಲ್ಲಿ ಜನರು ನಾರ್ವೆ ಬಗ್ಗೆ ಪರಿಚಯಿಸಿಕೊಳ್ಳಲು, ಮಕ್ಕಳ ಹಕ್ಕುಗಳು ಅವರಿಗೆ ಯಾಕೆ ಮುಖ್ಯ ಎನ್ನುವ ವಿಚಾರ ತಿಳಿದುಕೊಳ್ಳಲು ಹಾಗೆಯೇ ನಮ್ಮ ಸಂಸ್ಕೃತಿಯಲ್ಲಿ ಅತಿಥಿಗಳನ್ನು ಆದರಿಸಿ ಸತ್ಕರಿವುದನ್ನು ನಾರ್ವೆಯ ತಂಡ ಅನುಭವ ಪಡೆದುಕೊಳ್ಳಲು ಇದೊಂದು ಅಪೂರ್ವ ಅವಕಾಶವಾಗಿದೆ. ಮಕ್ಕಳ ಹಕ್ಕುಗಳಿಗೆ ಬದ್ಧರಾದ ಈ ತಂಡ ಮಾರ್ಗದುದ್ದಕ್ಕೂ ಆ ಬಗ್ಗೆ ಮಾತುಕಥೆ ನಡೆಸುವ ಮೂಲಕ ಹೊಸ ಆಲೋಚನೆಗಳನ್ನು ಕರ್ನಾಟಕದ ವಿವಿದೆಡೆ ಹುಟ್ಟುಹಾಕುವ ಮಹಾನ್ ಇಚ್ಚೆ ಹೊಂದಿದ್ದಾರೆ. ಅಲ್ಲದೇ ಆ ಅನುಭವಗಳನ್ನು ತಮ್ಮ ದೇಶದಲ್ಲಿ ಯುವ ಜನರಿಗೆ ಹಾಗೂ ಮಕ್ಕಳಿಗೆ ತಲುಪಿಸಬೇಕು ಎಂಬುದು ಅವರ ಮಹತ್ವಾಕಾಂಕ್ಷೆ.
ಕನ್ನಡ ಕಲಿಯುವೆ..
ಈ ಸಂದರ್ಭ ಮಾತನಾಡಿ ಕ್ಷತಿಲ್, ಮುಂದಿನ ಬಾರೀ ಇಲ್ಲಿಗೆ ಬರುವಾಗ ಸಾಧಾರಣ ಮಟ್ಟಿಗೆ ಕನ್ನಡ ಕಲಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕುಂದಾಪುರ-ಬೆಂಗಳೂರು ಪ್ರಯಾಣದ ನಡುವೆ ನಾವು ಕಲಿಯುವುದು ಹಾಗೂ ಬದಲಾಗಬೇಕಿರುವುದು ಬಹಳಷ್ಟಿದೆ. ಈ ಪ್ರಯ್ತನವನ್ನು ಮಾಡುವ ಸಲುವಾಗಿಯೇ ‘ಬದಲಾವಣೆಗಾಗಿ ನಡೆದಾಟ’ ಎನ್ನುವ ಈ ನಡಿಗೆ ಆರಂಭಿಸಿದ್ದು ದಿನಕ್ಕೆ 20 ಕಿಲೋಮೀಟರ್ ಸಂಚಾರ ಮಾಡಲಿದ್ದೇವೆ ಎಂದರು.
ಪ್ರೆಸ್ ಮೀಟ್ ಮತ್ತು ಕಾರ್ಯಕ್ರಮಕ್ಕೆ ಚಾಲನೆ
ಶುಕ್ರವಾರ ಬೆಳಿಗ್ಗೆ ಕುಂದಾಪುರದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಚಾರದ ಬಗ್ಗೆ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಹಾಯಕ ನಿರ್ದೇಶಕ ಗಣಪತಿ.ಎಂ.ಎಂ ವಿವರಣೆ ನೀಡಿದರು. ಮಧ್ಯಾಹ್ನ ‘ಬದಲಾವಣೆಗಾಗಿ ನಡೆದಾಟ’ ಕಾರ್ಯಕ್ರಮಕ್ಕೆ ಚಾಲನೆಯನ್ನು ಹಟ್ಟಿಯಂಗಡಿ ಗ್ರಾ.ಪಂ. ಅಧ್ಯಕ್ಷ ರಾಜೀವ್ ಶೆಟ್ಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಹಟ್ಟಿಯಂಗಡಿ ಕನ್ಯಾನದ ನಮ್ಮಭೂಮಿ ಸಂಸ್ಥೆ ನಿರ್ದೇಶಕ ದಾಮೋದರ ಆಚಾರ್ಯ, ಮಕ್ಕಳ ಪಂಚಾಯತ್ ಅಧ್ಯಕ್ಷೆ ಯಲ್ಲಮ್ಮ, ವೆಂಕಟೇಶ್ ಮೂಡ್ಕೇರಿ ಮೊದಲಾದವರು ಇದ್ದರು.