ಮಂಗಳೂರು : ಮಂಗಳೂರು ನಗರದ ಸರ್ವಾಂಗೀಣಾ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಇದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ. ಆದರೆ ನಾನು ಈ ರೀತಿ ಕಾರ್ಯ ನಿರ್ವಾಹಿಸ ಬೇಕಾದರೆ `ದಯವಿಟ್ಟು ನನ್ನನ್ನು ಉದ್ಘಾಟನೆ, ಸಭೆ, ಸಮಾರಂಭಗಳಿಗೆ ಕರೆಯಬೇಡಿ. ಆ ಸಮಯವನ್ನು ಜನರ ಕೆಲಸಕ್ಕೆ ಮೀಸಲಿಡಲು ಅವಕಾಶ ನೀಡಿ’ ಎಂದು ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಅಯ್ಕೆಯಾದ ಹರಿನಾಥ್ ಕೆ. ಅವರು ಹೇಳಿದ್ದಾರೆ.
ಮೇಯರ್ ಆಗಿ ಆಯ್ಕೆಯಾದ ಬಳಿಕ ಅಧಿಕಾರ ಸ್ವೀಕರಿಸಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಉದ್ಘಾಟನೆ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಯ ಹಾಳು. ಇದರಿಂದ ನಮ್ಮನ್ನು ನಂಬಿ ಮತ ನೀಡಿದ ಮತದಾರರು ಹಾಗೂ ಸಾರ್ವಜನಿಕರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದರು.
ನಗರದಲ್ಲಿ ಶೀಘ್ರವೇ ಉಚಿತ ಅಂಬುಲೆನ್ಸ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ಆರಂಭದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಖಾಸಗಿ ವಾಹನದ ಮೂಲಕ ಈ ಸೇವೆ ಆರಂಭಗೊಳ್ಳಲಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ.ನಗರದ ಒಳಚರಂಡಿ ವ್ಯವಸ್ಥೆಯನ್ನು ಪುನರ್ ನಿರ್ಮಿಸುವ ನಿಟ್ಟಿನಲ್ಲಿ ಹಳೆಯ ಪೈಪ್‌ಲೈನ್‌ಗಳನ್ನು ತೆಗೆದು ಹೊಸತನ್ನು ಅಳವಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ನೂತನ ಮೇಯರ್ ಹೇಳಿದರು.
ಪಾಲಿಕೆ ವತಿಯಿಂದ ಈಗಾಗಲೇ ಪೌರ ಕಾರ್ಮಿಕರಿಗೆ ಗೃಹಭಾಗ್ಯ, ನಗರವನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿಸುವುದು, ಪುರಭವನಕ್ಕೆ ಹೊಸ ರೂಪು, ಕಾಂಕ್ರಿಟೀಕರಣಗೊಂಡ ರಸ್ತೆಗಳಲ್ಲಿ ಚರಂಡಿ ನಿರ್ಮಾಣಕ್ಕೆ ಟೆಂಡರ್ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಎಂಟು ಅಂಶಗಳ ಕ್ರಿಯಾ ಯೋಜನೆ ಮೂಲಕ ನಗರದಲ್ಲಿ ಮಲೇರಿಯಾ ರೋಗ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇರಿಸಲಾಗಿದ್ದು, ಈ ಹಿಂದಿನ ಮೇಯರ್‌ಗಳು ಕೈಗೊಂಡ ಪ್ಲಾಸ್ಟಿಕ್ ಮುಕ್ತ ನಗರದ ಯೋಜನೆಗೆ ಒತ್ತು ನೀಡಲಾಗುವುದು ಎಂದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಈ ಹಿಂದಿನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪ್ರಕಾಶ್ ಸಾಲಿಯಾನ್, ದೀಪಕ್ ಪೂಜಾರಿ ಹಾಗೂ ಮತ್ತಿತರ ಪಾಲಿಕೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.