ಕುಂದಾಪುರ: ತಾಲೂಕಿನ ಕಟ್ಬೆಲ್ತೂರ್ ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದ ಎಂಬಲ್ಲಿ ನಿರ್ಮಿಸಲು ಉದ್ದೇಶಿಸಲಾದ ಕೋಟಿಗಟ್ಟಲೇ ಅಂದಾಜು ವೆಚ್ಚದ ಮೀನುಸಂಸ್ಕರಣಾ ಘಟಕದ ಕಟ್ಟಡಕ್ಕೆ ಯಾವುದೇ ಒಳಿತು ಕೆಡುಕನ್ನು ಪರಾಮರ್ಶಿಸದೇ ಪರವಾನಿಗೆ ನೀಡಿದ ಗ್ರಾಮಪಂಚಾಯತ್ ತನ್ನ ನಿಲುವನ್ನು ಹಿಂಪಡೆದು ಪರವಾನಿಗೆ ರದ್ಧುಗೊಳಿಸಬೇಕು, ಗ್ರಾಮದ ಹಿತಕಾಪಾಡುವಂತೆ ಗ್ರಾಮಪಂಚಾಯತನ್ನು ಎಚ್ಚರಿಸಲು ಮಾ.15 ಕ್ಕೆ ಕಟ್ಬೆಲ್ತೂರ್ ಗ್ರಾಮಪಂಚಾಯತ್ ಎದುರು ಬ್ರಹತ್ ಮಟ್ಟದ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ಹೇಳಿದ್ದಾರೆ.
ಅವರು ಕುಂದಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಖಾಸಗಿಯವರು ಅಂದಾಜು 25 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಮೀನು ಸಂಸ್ಕರಣಾ ಘಟಕದ ಕಟ್ಟಡಕ್ಕೆ ಪಂಚಾಯತ್ ಪರವಾನಿಗೆ ನೀಡಿತ್ತು. ಆದರೇ ನಿಯಮದ ಪ್ರಕಾರ ಯವುದೇ ಪರವಾನಿಗೆ ನೀಡಲು ಸರ್ವಸದಸ್ಯರ ಸಭೆ ಕರೆದು ಸಾಮಾನ್ಯ ಸಭೆ ನಡೆಸಿ ಎಲ್ಲರ ಒಕ್ಕೋರಲ ಅಭಿಪ್ರಾಯ ಪಡೆಯಬೇಕಿತ್ತು. ಆದರೇ ಪಂಚಾಯತ್ ಇವೆಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಕಟ್ಟಡ ಪರವಾನಿಗೆ ನೀಡುವ ಮೂಲಕ ಸ್ಥಳೀಯ ಭಾಗದ ಜನರ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಹಿಂದೊಮ್ಮೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆದರೇ ಈಗ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಗ್ರಾಮಪಂಚಾಯತ್ ನೋಡಿಯೂ ನೋಡದಂತೆ ಜಾಣಕುರುಡು ಪ್ರದರ್ಶಿಸುತ್ತಿದೆ. ಸಾಮಾಜಿಕ ಕಳಕಳಿಯ ಹೋರಾಟ ನಡೆಸಿ ಜನಪರ ನಿಲುವನ್ನು ಪ್ರದರ್ಶಿಸಬೇಕಿದ್ದ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಈ ಬಗ್ಗೆ ಹಲವು ಬಾರೀ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಜಯಕರ್ನಾಟಕ ಸಂಘಟನೆ ಗ್ರಾಮದ ಹಿತಕ್ಕಾಗಿ ಈ ಧರಣಿಗೆ ಮುಂದಾಗಿದೆ ಎಂದರು.
ಜನವಸತಿ ಪ್ರದೇಶದಲ್ಲಿ ಈ ಕೈಗಾರಿಕೆ ಘಟಕ ಆರಂಭಿಸಿದ್ದು ಈ ಘಟಕದಿಂದ ಹರಿದುಬರುವ ತ್ಯಾಜ್ಯಗಳಿಂದ ಪರಿಸರ ಮಾಲೀನ್ಯ ಜಲಮಾಲಿನ್ಯ ಸಂಭವಿಸಿ ಸಾರ್ವಜನಿಕ ಜೀವನಕ್ಕೆ ಸಮಸ್ಯೆಯಾಗಲಿದೆ. ಇಂತಹಾ ಬ್ರಹತ್ ಕೈಗಾರಿಕೆ ಕಟ್ಟಡ ನಿರ್ಮಾಣಕ್ಕೂ ಮೊದಲು ಜನಭಿಪ್ರಾಯ ಸಂಗ್ರಹ ಮಾಡಬೇಕಿತ್ತು. ಅಲ್ಲದೇ ಈ ಬಗ್ಗೆ ವಿಶೇಷ ಗ್ರಾಮಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಬಳಿಕ ಪರವಾನಿಗೆ ನೀಡಬೇಕಿತ್ತು. ಇದ್ಯಾವುದನ್ನೂ ಮಾಡದೇ ಗ್ರಾಮಪಂಚಾಯತ್ ಏಕಾಏಕಿ ಕಟ್ಟಡ ಪರವಾನಿಗೆ ನೀಡುವ ಮೂಲಕ ಜನರಿಗೆ ಅನ್ಯಾಯ ಮಾಡಿದೆ ಎಂದು ಜನನಿ ಆರೋಪಿಸಿದರು.
ಪ್ರತಿಭಟನೆಗೂ ತಡೆ..?
ಜಯಕರ್ನಾಟಕ ಸಂಘಟನೆ ಜನಪರವಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದು, ದೇವಲ್ಕುಂದ ಮೀನುಸಂಸ್ಕರಣಾ ಘಟಕದ ವಿಚಾರವಾಗಿ ಪ್ರತಿಭಟನೆ ನಡೆಸದಂತೆ ಹಲವು ಒತ್ತಡಗಳು ಬರುತ್ತಿದ್ದು ಇದರಲ್ಲಿ ಪೊಲೀಸ್ ಇಲಾಖೆಯೂ ಶಾಮೀಲಾಗಿದೆಯೇ ಎಂಬ ಅನುಮಾನವಿದೆ ಎಂದು ಆರೋಪಿಸಿದ ಜನನಿ ದಿವಾಕರ ಶೆಟ್ಟಿ ಅವರು, ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದು ಇದಕ್ಕೆ ಯಾವ ಒತ್ತಡ ಕಾರಣವೋ ತಿಳಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಹಕ್ಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮಾತುಕತೆ ನಡೆಸಿ ವಿಚಾರವನ್ನು ಗಮನಕ್ಕೆ ತರಲಿದ್ದೇವೆ. ಒಂದೊಮ್ಮೆ ಇಲಾಖೆಯಿಂದ ಅನುಮತಿ ಸಿಕ್ಕದೆ ಇದ್ದಲ್ಲಿಯೂ ಕೂಡ ಜನರ ಹಾಗೂ ಗ್ರಾಮದ ಹಿತರಕ್ಷಣೆ ಸಲುವಾಗಿ ಪ್ರತಿಭಟನೆ ಮಾಡಿಯೇ ಸಿದ್ಧ ಎಂದರು. ಮಂಗಳವಾರ ನಡೆಯುವ ಈ ಪ್ರತಿಭಟನೆಗೆ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಜಯಕರ್ನಾಟಕ ಸಂಘಟನೆಗಳು ಸಾಥ್ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆಯ ಹೆಮ್ಮಾಡಿ ಘಟಕಾಧ್ಯಕ್ಷ ಪ್ರಕಾಶ್ ಮೊಗವೀರ, ಗೌರವಾಧ್ಯಕ್ಷ ಯು. ಸತ್ಯನಾರಾಯಣ ರಾವ್, ಜಯಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಪದಾಧಿಕಾರಿಗಳಾದ ಅಣ್ಣಪ್ಪ ಕುಲಾಲ್, ನಿತ್ಯಾನಂದ ಅಮೀನ್, ಹೆಮ್ಮಾಡಿ ಗ್ರಾ,ಪಂ, ಮಾಜಿ ಅಧ್ಯಕ್ಷ ರಾಜು ಪೂಜಾರಿ ಹೆಮ್ಮಾಡಿ, ಹಟ್ಟಿಯಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಮೊದಲಾದವರಿದ್ದರು.