ಮಂಗಳೂರು, ಮಾ.13:ಅತಿವೇಗವಾಗಿ ಬಂದ ಕಾರೊಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿದ್ದ ಘಟನೆ ನಿನ್ನೆ ಮಧ್ಯಾಹ್ನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲ ಮೊಗರು ಎಂಬಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಕುತ್ತಾರು ಕಬೆಕೋಡಿ ನಿವಾಸಿ, ದಿ.ಪೂವಪ್ಪ ಪೂಜಾರಿ – ಯಮುನಾ ದಂಪತಿಯ ಪುತ್ರ ಬಾಲಕೃಷ್ಣ ಪೂಜಾರಿ (35) ಎಂದು ಹೆಸರಿಸಲಾಗಿದೆ.
ವಿದೇಶದಲ್ಲಿ ದುಡಿಯುತ್ತಿದ್ದ ಅವರು ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದರು. ಸದ್ಯಕ್ಕೆ ಕುತ್ತಾರು ಜಂಕ್ಷನ್ನಿನಲ್ಲಿರುವ ತನ್ನ ಸೋದರಿಯ ಒಡೆತನದ ಶ್ರೀಗಣೇಶ ಹೊಟೇಲ್ ನಲ್ಲಿ ದುಡಿಯುತ್ತಿದ್ದರು.
ಅಂಬ್ಲಮೊಗರು ಗ್ರಾಮದ ಅಡು ಸಮೀಪ ಕಟ್ಟಡವೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಯ ಕಾರ್ಮಿಕರಿಗೆ ಊಟದ ಪಾರ್ಸೆಲ್ ಗಳನ್ನು ತಲುಪಿಸಲೆಂದು ಬಾಲಕೃಷ್ಣ ಪೂಜಾರಿ ಸ್ಕೂಟರ್ ನಲ್ಲಿ ಅಲ್ಲಿಗೆ ತೆರಳುತ್ತಿದ್ದರು. ಅಡು ತಲುಪುತ್ತಿದ್ದಂತೆ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸಹಿತ ರಸ್ತೆಗೆಸೆಯಲ್ಪಟ್ಟ ಬಾಲಕೃಷ್ಣ ಪೂಜಾರಿಯವರಿಗೆ ಗಂಭೀರ ಗಾಯಗಳಾಗಿದ್ದವು. ಚಿಂತಾಜನಕ ಸ್ಥಿತಿಯಲ್ಲಿದ್ದವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತ ಬಾಲಕೃಷ್ಣ ಪೂಜಾರಿ ಪತ್ನಿ ಅವಳಿ-ಜವಳಿ ಪುತ್ರಿಯರು, ತಾಯಿ, ಸೋದರರು ಮತ್ತು ಸೋದರಿಯನ್ನು ಅಗಲಿದ್ದಾರೆ.
ಬಾಲಕೃಷ್ಣರ ಕಿರಿಯ ಸಹೋದರನ ಮದುವೆ ಎಪ್ರಿಲ್ ೨೯ಕ್ಕೆ ನಿಗದಿಯಾಗಿದೆ. ಆದರೆ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಬಾಲಕೃಷ್ಣರ ಸಾವಿನಿಂದ ಶೋಕ ತುಂಬಿಕೊಂಡಿದೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.