ಕನ್ನಡ ವಾರ್ತೆಗಳು

ರೂ.130 ಕೋಟಿ ವೆಚ್ಚದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ : ಶಾಸಕ ಮೊಯ್ದಿನ್ ಬಾವಾ

Pinterest LinkedIn Tumblr

Moidin_bava_Press_1

ಮಂಗಳೂರು,ಮಾ.17 : ಮಂಗಳೂರು ಉತ್ತರ ವಿಧಾನ ಸಭಾ (ಸುರತ್ಕಲ್) ಕ್ಷೇತ್ರದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲ ಹಂತವಾಗಿ ಮೂರು ಹಂತಗಳಲ್ಲಿ ನಿಧಿ ವಿನಿಯೋಗಿಸಿಕೊಂಡು 1.80 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಕೇಂದ್ರ ಮೈದಾನಕ್ಕೆ ವರ್ಗಾಯಿಸಲಾಗುವುದು ಎಂದು ಶಾಸಕ ಮೊಯ್ದಿನ್ ಬಾವಾ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಆರ್‌ಪಿಎಲ್ ರಸ್ತೆ ಕಾನ-ಕಟ್ಲವರೆಗಿನ ನೂತನ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಸುರತ್ಕಲ್‌ನಿಂದ ಚೊಕ್ಕಬೆಟ್ಟುವರೆಗಿನ ರಸ್ತೆಯನ್ನು ಷಟ್ಪಥ ರಸ್ತೆ ನಿರ್ಮಾಣ ಸೇರಿದಂತೆ ಸುರತ್ಕಲ್‌ನಲ್ಲಿ ನೂತನ ಮಾರುಕಟ್ಟೆ ನಿರ್ಮಾಣ, ಸುರತ್ಕಲ್ ಹಾಗೂ ಕುಂಠಿಕಾನದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.

Moidin_bava_Press_2

ಹಲವು ವರ್ಷಗಳಿಂದ ಪ್ರಸ್ತಾವನೆಯಲ್ಲಿದ್ದ ಶ್ರೀನಿವಾಸ ಮಲ್ಯಭವನ ನಿರ್ಮಾಣಕ್ಕೆ ಈಗಾಗಲೇ 1 ಕೋಟಿ ರೂ. ಜಿಲ್ಲಾಡಳಿತದ ಕೈಸೇರಿದೆ. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‌ರ ಅನುದಾನ ಸೇರಿಸಿಕೊಂಡು 1.2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಲ್ಯಭವನ ನಿರ್ಮಾಣವಾಗಲಿದೆ ಎಂದರು.

ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಗೂಂಡಾಗಿರಿ ಮತ್ತು ಬಸ್ ಮಾಲಕರಿಂದ ಹಗಲು ದರೋಡೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬಸ್ ಮಾಲಕರು ತಿಂಗಳಿಗೆ ನೀಡಬೇಕಿರುವ 5,100 ರೂ. ಮೊತ್ತವನ್ನು 2,000 ರೂ. ಗೆಇಳಿಸುವಂತೆ ಟೋಲ್‌ಗೇಟ್‌ನ ಮಾಲಕರಲ್ಲಿ ವಿನಂತಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Moidin_bava_Press_3

ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿನ ಪದ್ಮಾವತಿ ಆಸ್ಪತ್ರೆಯ ಮುಂಭಾಗದಲ್ಲಿ ಹಾದು ಹೋಗಿರುವ ಸರ್ವಿಸ್ ರಸ್ತೆಯನ್ನು ವಿಸ್ತರಿಸುವ ಬಗ್ಗೆ ಈಗಾಗಲೇ ಹೆದ್ದಾರಿ ಪ್ರಾಧಿ ಕಾರದೊಂದಿಗೆ ಮಾತುಕತೆಗಳು ನಡೆಸಲಾಗಿದೆ. ಸಿಟಿಲಂಚ್ ಹೋಮ್ ಬಳಿ ಸರ್ವಿಸ್ ರಸ್ತೆ ಮಾಡುವ ಬಗ್ಗೆ ಈಗಾಗಲೇ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಯಾವುದೇ ಶಿಫಾರಸುಗಳಿಗೆ ಮಣಿಯದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕರು ಹೇಳಿದರು.

ಮನಪಾ ಮೇಯರ್ ಹರಿನಾಥ್ ಹಾಗೂ ಮತ್ತಿತ್ತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Write A Comment