ಮಂಗಳೂರು: ಕರಾವಳಿಯ ಜನರಿಗೆ ಮಾರಕವಾಗಿರುವ ಎತ್ತಿನಹೊಳೆ ಯೋಜನೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ಮಾತನಾಡಿ, ‘ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅಸಂಖ್ಯಾತ ಕೈಗಾರಿಕೆಗಳನ್ನು ಬಲವಂತವಾಗಿ ಸ್ಥಾಪಿಸುವ ಮೂಲಕ ಮೊದಲು ನೆಲವನ್ನು ವಶಪಡಿಸಿಕೊಳ್ಳಲಾಯಿತು. ಇದೀಗ ಜಲದ ಮೇಲೆ ಕಣ್ಣು ಬಿದ್ದಿದ್ದು, ಇಲ್ಲಿನ ಜೀವನದಿಯನ್ನು ಬರಿದು ಮಾಡುವ ಕೆಲಸಕ್ಕೆ ರಾಜ್ಯ ಸರಕಾರವೇ ಕೈಹಾಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ನಾಳೆ ಕುಡಿಯುವ ನೀರಿಗೆ ತಾತ್ವಾರ ಬಂದೊದಗಲಿದೆ, ಜಿಲ್ಲೆ ಕಸದ ತೊಟ್ಟಿಯಂತಾಗಲಿದೆ’ ಎಂದು ಆರೋಪಿಸಿದರು.
‘ರಾಜ್ಯ ಸರಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ನೀರಾವರಿ ಯೋಜನೆಗೆ ಈಗಾಗಲೇ ಚೆನ್ನೈನ ಹಸಿರು ನ್ಯಾಯಾಧೀಕರಣ ಪೀಠ ತಡೆಯಾಜ್ಞೆಯನ್ನು ನೀಡಿದೆ. ಆದರೂ ಸರಕಾರ ಕಾಮಗಾರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಜಿಲ್ಲೆಯ ಕೆಲ ಸಚಿವರುಗಳು ಯೋಜನೆಯನ್ನು ನಡೆಸಿಯೇ ಸಿದ್ಧ ಎನ್ನುತ್ತಿದ್ದಾರೆ. ಜಲ್ಲೆಯ ಜನರ ಕಳವಳಕ್ಕೆ ಕಾರಣವಾಗಿರುವ ಯೋಜನೆಯನ್ನು ನಿಲ್ಲಿಸದೇ ಹೋದಲ್ಲಿ ಗಂಭೀರ ಸ್ವರೂಪದ ಪ್ರತಿಭಟನೆಯನ್ನು ಎದುರಿಸಬೇಕಾದೀತು. ಜನರು ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಈ ಸಂದರ್ಭ ಕೇಮಾರುಶ್ರೀ ಎಚ್ಚರಿಸಿದರು.
ಸಹ್ಯಾದ್ರಿ ಸಂರಕ್ಷಣಾ ಸಂಚಯನ ಸಮಿತಿಯ ದಿನೇಶ್ ಹೊಳ್ಳ ಅವರು ಮಾತನಾಡಿ, ಸಕಲೇಶಪುರದ ಎತ್ತಿನಹಳ್ಳ ಪ್ರದೇಶದಿಂದ ಬಯಲುಸೀಮೆಗೆ ನೀರನ್ನು ಪಂಪ್ ಮಾಡುವ ಕಾಮಗಾರಿ ಚಾಲನೆಯಲ್ಲಿದ್ದು, ಜಿಲ್ಲೆಯ ಜನರ ವಿರೋಧದ ಮಧ್ಯೆಯೂ ಹೆಬ್ಬಸಾಲೆ ಗ್ರಾಮದಲ್ಲಿ ಭಾರೀ ಗಾತ್ರದ ಪೈಪ್‌ಗಳನ್ನು ತಂದು ರಾಶಿ ಹಾಕಲಾಗಿದೆ. ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಕಣ್ಣಿಗೆ ಮಣ್ಣೆರಚಿ ಬಯಲುಸೀಮೆಗೆ ನೀರನ್ನು ಹರಿಸುವ ಬದಲು ಅಲ್ಲಿರುವ ನೀರಿನ ಮೂಲಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮುಖಂಡ ಎಂ.ಜಿ. ಹೆಗ್ಡೆ ಮಾತನಾಡಿ, ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಬಿಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರಾವಳಿಗರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಮೂಲಕ ಎತ್ತಿನಹೊಳೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮುಂದಾಗಬೇಕು.ಮಾ.18ರಂದು ಬಜೆಟ್ ಮಂಡನೆಯಾಗಲಿದೆ. ಅದರಲ್ಲಿ ನೇತ್ರಾವತಿ ನದಿ ನೀರು ಸಂರಕ್ಷಣಾ ಪ್ರಾಧಿಕಾರವನ್ನು ರಚಿಸಬೇಕು. ಎತ್ತಿನಹೊಳೆ ಕಾಮಗಾರಿಯನ್ನು ಸರ್ಕಾರ ಸ್ಥಗಿತಗೊಳಿಸಬೇಕು. ಬಯಲುಸೀಮೆಗೆ ಸಮಗ್ರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.
ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟಕ್ಕೆ ಪ್ರತ್ಯೇಕ ಕಚೇರಿ ತೆರೆಯಲಾಗಿದೆ. ಎಪ್ರಿಲ್‌ನಲ್ಲಿ ಮಂಗಳೂರು ಪುರಭವನದಲ್ಲಿ ಎತ್ತಿನಹೊಳೆ ವಿರುದ್ಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಜನಪ್ರತಿನಿಧಿಗಳು, ಎಲ್ಲ ಸಮುದಾಯಗಳು ಹಾಗೂ ಪರಿಸರ ತಜ್ಞರನ್ನು ಆಹ್ವಾನಿಸಲಾಗುವುದು. ಹೋರಾಟಕ್ಕೆ ನೆರವು ನೀಡಿದವರೇ ಎತ್ತಿನಹೊಳೆ ಯೋಜನೆಯ ಪರವಾಗಿ ಮಾತನಾಡಲು ಆರಂಭಿಸಿರುವುದು ಅಚ್ಚರಿ ತಂದಿದೆ ಎಂದು ಎಂ.ಜಿ. ಹೆಗ್ಡೆ ಆರೋಪಿಸಿದರು.
ರಾಮಚಂದ್ರ ಬೈಕಂಪಾಡಿ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆಗೆ 20 ಸಾವಿರ ಕೋಟಿ ಘೋಷಿಸಿದ್ಧು ಎತ್ತಿನಹೊಳೆಯಿಂದ ನೀರು ಸಿಗುವುದಿಲ್ಲ ಎಂಬ ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಹುಡುಕುತ್ತಿದ್ದು ಇದೀಗ ಶರಾವತಿ ನೀರಿನ ಮೇಲೆ ಸರಕಾರ ಕಣ್ಣಿಟ್ಟಿದೆ. ಕರಾವಳಿಯನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣನೆ ಮಾಡುತ್ತಿದ್ದು ಕರಾವಳಿಯು ಕರ್ನಾಟಕದ ಭಾಗವೇ ಎಂಬ ಸಂಶಯ ಮೂಡುತ್ತಿದೆ. ಎತ್ತಿನಹೊಳೆ ಯೋಜನೆ, ಭೂತಾರಾಧನೆ, ಕಂಬಳಕ್ಕೆ ತಡೆಯೊಡ್ಡಿ ಕರಾವಳಿಯನ್ನು ಕೃಷಿಗೆ ಅಯೋಗ್ಯ ಭೂಮಿ ಎಂದು ಮಾಡಿ ಮಂಗಳೂರನ್ನು ಕೈಗಾರಿಕಾ ವಲಯವನ್ನಾಗಿ ಘೋಷಿಸುವ ಸಂಚನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಪರಿಸರ ಹಾಗೂ ನೇತ್ರಾವತಿ ಸಂಘಟನೆಗಳ ಮುಖಂಡರಾದ ದಿನಕರ ಶೆಟ್ಟಿ, ನಿರಂಜನ, ಪ್ರಶಾಂತ್ ರಾವ್, ರೋಹಿತ್ ಕುಮಾರ್, ಜೆರಾಲ್ಡ್, ಆನಂದ್ ಅಮೀನ್ ಅಡ್ಯಾರ್,ಶಶಿರಾಜ್ ಶೆಟ್ಟಿ ಕೊಳಂಬೆ, ತುರವೇ ಅಧ್ಯಕ್ಷ ಯೋಗೀಶ್ ಶೆಟ್ಟಿ, ರೋಹಿಣಿ ಮತ್ತಿತರ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.