ಮಂಜೇಶ್ವರ, ಮಾ.17 : ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರಿನ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಕೇರಳ ರಾಜ್ಯದ ಮಂಜೇಶ್ವರ -ಹೊಸಂಗಡಿ ಚೆಕ್ ಪೋಸ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯನ್ನು ಉದ್ಯಾವರದ ಇರ್ಷಾದ್ ನಗರ ಮಸೀದಿ ಬಳಿಯ ನಿವಾಸಿ, ಕೊಲ್ಲಿ ಉದ್ಯೋಗಿಯಾಗಿರುವ ಶೇಖ್ ಎನ್ನುವವರ ಪುತ್ರ ಷಹಜಹಾನ್ (21) ಎನ್ನಲಾಗಿದೆ. ಈತ ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ.
ನಿನ್ನೆ ರಾತ್ರಿ ಏಳು ಗಂಟೆಯ ಸುಮಾರಿಗೆ ತನ್ನ ಬೈಕ್ ನಲ್ಲಿ ಉದ್ಯಾವರಕ್ಕೆ ತೆರಳಿದ್ದ ಷಹಜಹಾನ್ ಅದನ್ನು ಅಲ್ಲಿ ಪಾರ್ಕ್ ಮಾಡಿದ್ದ. ಬಳಿಕ ಸ್ನೇಹಿತನೋರ್ವನ ಹೊಂಡಾ ಆಕ್ಟಿವಾ ಸ್ಕೂಟರ್ ನ್ನು ಪಡೆದುಕೊಂಡು ಉಪ್ಪಳದತ್ತ ಪ್ರಯಾಣಿಸುತ್ತಿದ್ದಾಗ 8.30 ರ ಸುಮಾರಿಗೆ ಹೊಸಂಗಡಿ ಚೆಕ್ ಪೋಸ್ಟ್ ಬಳಿ ತಲುಪಿದಾಗ ಮಂಗಳೂರಿನತ್ತ ಚಲಿಸುತ್ತಿದ್ದ ಮೀನು ತುಂಬಿದ್ದ ಲಾರಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸಹಿತ ರಸ್ತೆಗೆಸೆಯಲ್ಪಟ್ಟ ಷಹಜಹಾನ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ್ದಾನೆ.