ಮಂಗಳೂರು,ಮಾ.24 : ನಗರ ವಾಸಿಗಳಿಗೆ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳಲು ರಾಜ್ಯ ಸರಕಾರ ಅರಣ್ಯ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಿದ ಮಂಗಳೂರಿನ ಕುಳೂರು ಸಮೀಪದ ತಣ್ಣೀರುಬಾವಿಯ ಟ್ರೀ ಪಾರ್ಕ್ (ಸಸ್ಯೋದ್ಯಾನ) ಮಾ. 26ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕೆ.ಟಿ. ಹನುಮಂತಪ್ಪ ಮಾಹಿತಿ ನೀಡಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲ್ಗುಣಿ ನದಿ ಮತ್ತು ಅರಬಿ ಸಮುದ್ರದ ತಟದಲ್ಲಿ 15 ಹೆಕ್ಟೇರ್ ಪ್ರದೇಶದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ನದಿ ತೀರದ 9 ಹೆಕ್ಟೇರ್ ಪ್ರದೇಶದಲ್ಲಿ ಹೊನ್ನೆ ಮರದ ನೆಡುತೋಪು ಇದೆ. ಉಳಿದ 6 ಹೆಕ್ಟೇರ್ನಲ್ಲಿ ಪಶ್ಚಿಮ ಘಟ್ಟದ 50ರಷ್ಟು ವಿವಿಧ ಜಾತಿಯ ಅಪೂರ್ವ ಗಿಡ, ಮರ, ಬಳ್ಳಿಗಳನ್ನು ನೆಡಲಾಗಿದೆ. 16 ಔಷಧೀಯ ಗಿಡಗಳ ಉದ್ಯಾನವೂ ಇದೆ. ಪಾರ್ಕ್ನ ಸುತ್ತಲೂ 31 ಲಕ್ಷ ರೂ. ವೆಚ್ಚದಲ್ಲಿ ಬೇಲಿಯನ್ನು ಹಾಕಿ ಭದ್ರ ಪಡಿಸಲಾಗಿದೆ ಎಂದರು.
ಟ್ರೀ ಪಾರ್ಕ್ನಲ್ಲಿ ಫುಟ್ಪಾತ್, ವಿಶ್ರಾಂತಿ ಪಡೆಯಲು ಬೆಂಚುಗಳಿವೆ. ಮರ, ಗಿಡ, ಬಳ್ಳಿಗಳ ಮಾಹಿತಿ ಹಾಗೂ ಅವುಗಳನ್ನು ಸಂರಕ್ಷಿಸುವ ಆವಶ್ಯಕತೆಯನ್ನು ವಿವರಿಸುವ ಫಲಕಗಳು; ಜೀವ ವೈವಿಧ್ಯ, ಜೀವ ಸಂಕುಲ ಮತ್ತು ವನ್ಯಜೀವಿಗಳ ಬಗ್ಗೆ ತಿಳುವಳಿಕೆ ನೀಡಲು ಪ್ರತ್ಯೇಕ ಕೌಂಟರ್ ಇದೆ. ಸಂಸ್ಕೃತಿಯನ್ನು ಮೇಳೈಸಲು ವ್ಯವಸ್ಥೆ ಇದೆ. ವಿಶೇಷವಾಗಿ ಯಕ್ಷಗಾನ, ಕಂಬಳ, ಭೂತಕೋಲ, ಗಿರಿಜನರ ಜೀವನ ಕ್ರಮದ ಚಿತ್ರಣವನ್ನು ಇಲ್ಲಿ ನೀಡಲಾಗುತ್ತದೆ.
ಮಕ್ಕಳ ಆಟದ ಮೈದಾನ ನಿರ್ಮಾಣ, ಶಾಲಾ ವಿದ್ಯಾರ್ಥಿಗಳಿಗೆ ನೇಚರ್ ಕ್ಯಾಂಪ್ (ಪ್ರಕೃತಿ ಶಿಬಿರ) ನಡೆಸಲು ವ್ಯವಸ್ಥೆ, ಬೀಚ್ ವಾಲಿಬಾಲ್ ಅಂಗಣ ರಚಿಸಲಾಗುವುದು. ಪಕ್ಕದಲ್ಲಿಯೇ ಬೀಚ್ ಇರುವುದರಿಂದ ಮುಂದಿನ ದಿನಗಳಲ್ಲಿ ವಾಟರ್ ನ್ಪೊರ್ಟ್ಸ್ (ಜಲ ಸಾಹಸ ಕ್ರೀಡೆ) ಆರಂಭಿಸುವ ಉದ್ದೇಶವಿದೆ ಎಂದು ವಿವರಿಸಿದರು.
ಪಾರ್ಕ್ನಲ್ಲಿ ಲಘು ಉಪಹಾರದ (ಸ್ಯಾಕ್ಸ್, ಐಸ್ಕ್ರೀಂ ಇತ್ಯಾದಿ) 4 ಸ್ಟಾಲ್ಗಳಿರುತ್ತವೆ. ಸಿಆರ್ಝಡ್ ಪ್ರದೇಶ ವ್ಯಾಪ್ತಿಯಲ್ಲಿ ಪಾರ್ಕ್ ಇರುವುದರಿಂದ ಇಲ್ಲಿ ಯಾವುದೇ ಶಾಶ್ವತ ನಿರ್ಮಾಣಗಳಿಲ್ಲ; ಎಲ್ಲವೂ ಮರವನ್ನು ಉಪಯೋಗಿಸಿ ತಯಾರಿಸಿದ ನಿರ್ಮಾಣಗಳಾಗಿರುತ್ತವೆ. ಪಾರ್ಕ್ನ ಆಡಳಿತವನ್ನು ನೋಡಿಕೊಳ್ಳಲು “ಟ್ರೀ ಪಾರ್ಕ್ ನಿರ್ವಹಣಾ ಸಮಿತಿ’ ಯನ್ನು ರಚಿಸಲಾಗುವುದು. ಇದರಲ್ಲಿ ಅರಣ್ಯ ಇಲಾಖೆ ಮಾತ್ರವಲ್ಲದೆ ಇತರ ಹಲವು ಇಲಾಖೆಗಳ ಪ್ರತಿನಿಧಿಗಳಿರುತ್ತಾರೆ.
ಪ್ರವೇಶ ಹೇಗೆ: ಟ್ರೀ ಪಾರ್ಕ್ಗೆ ಮಾ. 31ರ ತನಕ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಎಪ್ರಿಲ್ 1ರಿಂದ ಪ್ರವೇಶ ಶುಲ್ಕ ಇರುತ್ತದೆ. ಶುಲ್ಕವು ಅತ್ಯಂತ ಕಡಿಮೆ ಇದ್ದು, ನಿರ್ವಹಣಾ ಸಮಿತಿಯು ಇದನ್ನು ನಿಗದಿ ಪಡಿಸಲಿದೆ. ಪ್ರಸ್ತುತ ಹಿರಿಯರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ನಿಗದಿ ಪಡಿಸುವ ಚಿಂತನೆ ಇದೆ. ಪ್ರವೇಶ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. ಬೆಳಗ್ಗೆ 9ರಿಂದ ಸಂಜೆ 7ರ ತನಕ ಪಾರ್ಕ್ ಸಾರ್ವಜನಿಕ ಪ್ರವೇಶಕ್ಕೆ ತೆರೆದಿರುತ್ತದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟ್ರೀಪಾರ್ಕ್ ನಿರ್ಮಾಣ ಯೋಜನೆಯನ್ನು ಸರಕಾರ ಕೈಗೆತ್ತಿಗೊಂಡಿದ್ದು, ಪ್ರಸ್ತುತ ಮಂಗಳೂರು ಸಹಿತ 6 ಜಿಲ್ಲೆಗಳಲ್ಲಿ ನಿರ್ಮಾಣಗೊಂಡಿವೆ. ಸರಕಾರದ ಸೂಚನೆ ಪ್ರಕಾರ ಟ್ರೀ ಪಾರ್ಕ್ಗೆ ಕನಿಷ್ಠ 20 ಎಕರೆ ಜಮೀನು ಬೇಕು.
ಪ್ರಕೃತಿ- ಪರಿಸರ ಸಂರಕ್ಷಣೆ ಮಾಡುವುದು, ಜೀವ ವೈವಿಧ್ಯತೆಯ ಬಗ್ಗೆ ಜನರಿಗೆ ಮಾಹಿತಿ ಮತ್ತು ಶಿಕ್ಷಣ ಒದಗಿಸುವುದು ಹಾಗೂ ನಗರ ವಾಸಿಗಳಿಗೆ ವಿಶ್ರಾಂತಿಯ ತಾಣವನ್ನು ಕಲ್ಪಿಸಿ ಕೊಡುವುದು ಟ್ರೀ ಪಾರ್ಕ್ ನಿರ್ಮಾಣ ಹಿನ್ನೆಲೆಯ ಉದ್ದೇಶ. ಮುಂದಿನ 4- 5 ವರ್ಷಗಳಲ್ಲಿ ಈಗ ನೆಟ್ಟಿರುವ ಗಿಡ, ಬಳ್ಳಿಗಳು ಬೆಳೆದು ಹಚ್ಚಹಸಿರಿನ ವಾತಾವರಣ ಇಲ್ಲಿ ಸೃಷ್ಟಿಯಾಗಿಲಿದೆ.
ಉದ್ಘಾಟನೆ: ಮಾ. 26 ರಂದು ಬೆಳಗ್ಗೆ 11.30ಕ್ಕೆ ಟ್ರೀ ಪಾರ್ಕನ್ನು ಅರಣ್ಯ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಶಾಸಕ ಜೆ.ಆರ್. ಲೋಬೊ ಅಧ್ಯಕ್ಷತೆ ವಹಿಸುವರು. ಸಚಿವರಾದ ಯು.ಟಿ. ಖಾದರ್, ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಇತರ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ. ಶ್ರೀಧರ ನಾಯಕ್, ವಲಯ ಅರಣ್ಯ ಅಧಿಕಾರಿ ಪಿ. ಶ್ರೀಧರ್ ಉಪಸ್ಥಿತರಿದ್ದರು.