ಕನ್ನಡ ವಾರ್ತೆಗಳು

ಪುತ್ತೂರು: ಖೋಟಾ ನೋಟು ದಂಧೆ: ವ್ಯಾಪಾರ ಭರಾಟೆಯಿರುವ ಕಡೆ ಚಲಾವಣೆ ಪತ್ತೆ

Pinterest LinkedIn Tumblr

fake-note

ಪುತ್ತೂರು, ಮಾ.24: ಉಪ್ಪಿನಂಗಡಿ ಪಟ್ಟಣದಲ್ಲಿ ಖೋಟಾ ನೋಟು ದಂಧೆ ಅವ್ಯಾಹತವಾಗಿದ್ದು, ದಂಧೆಕೋರರು ಪೆಟ್ರೋಲ್ ಪಂಪ್, ಬಾರ್ ಸೇರಿದಂತೆ ದೊಡ್ಡ ಪ್ರಮಾಣದ ವ್ಯಾಪಾರದ ಭರಾಟೆಯಿರುವ ಕಡೆ ಇದರ ಚಲಾವಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

500, 1000 ಮುಖಬೆಲೆಯ ಖೋಟಾ ನೋಟುಗಳು ಹೆಚ್ಚು ಚಲಾವಣೆಯಾಗುತ್ತಿವೆ. ಇಲ್ಲಿನ ಪೆಟ್ರೋಲ್ ಪಂಪ್‌ವೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದವರ‍ ಯಾರೋ ಖೋಟಾ ನೋಟುಗಳನ್ನು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಪೆಟ್ರೋಲ್ ಪಂಪ್‌ನವರಿಗೆ ಇದು ಖೋಟಾ ನೋಟುಗಳೆಂದು ಗೊತ್ತಾಗಿದ್ದು ಮಾತ್ರ ಬ್ಯಾಂಕ್‌ಗೆ ಹೋದಾಗ. ಇವರ ತಂದ ನಗದು ಬಂಡಲ್‌ನಲ್ಲಿ 1000 ಹಾಗೂ 500ರ ಮುಖಬೆಲೆಯ ಕೆಲವು ನೋಟುಗಳು ನಕಲಿಯಾಗಿತ್ತು. ಇದನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ಅದಕ್ಕೆ ಸೀಲ್ ಹೊಡೆದು, ಹರಿದು ಹಾಕಿದ್ದಾರೆ.

ಖೋಟಾ ನೋಟು ಚಲಾವಣೆಯ ದಂಧೆಯಲ್ಲಿ ಭಾಗಿಯಾಗಿರುವವರು ಚಿಲ್ಲರೆ ಕೇಳುವ ನೆಪದಲ್ಲಿ ಅಥವಾ ಗ್ರಾಹಕರ ಸೋಗಿನಲ್ಲಿ ಅಂಗಡಿ ಮಾಲಕರನ್ನು ಯಾಮಾರಿಸುತ್ತಿದ್ದು, ಸರಿಯಾಗಿ ಪರಿಶೀಲಿಸದೆ 1000 ಹಾಗೂ 500 ರ ನೋಟುಗಳನ್ನು ಪಡೆದರೆ ಮೋಸ ಹೋಗುವುದು ಖಂಡಿತ. ಈ ಖೋಟಾ ನೋಟುಗಳನ್ನು ಮೇಲ್ನೋಟಕ್ಕೆ ನೋಡಿದಾಗ ಅಸಲಿ ನೋಟಿನಂತೆಯೇ ಕಂಡು ಬರುತ್ತಿದ್ದು, ಸರಿಯಾಗಿ ಪರೀಕ್ಷಿಸಿದಾಗ ಮಾತ್ರ ಇದರ ನಿಜ ಬಣ್ಣ ತಿಳಿಯಲು ಸಾಧ್ಯ. ಕೆಲವೊಮ್ಮೆ ಖೋಟಾ ನೋಟುಗಳ ನಿಜ ಬಣ್ಣ ಕಣ್ಣೋಟದ ಪರೀಕ್ಷೆಯಲ್ಲಿಯೂ ಬಯಲಾಗುವುದಿಲ್ಲ. ಇದರ ಪರೀಕ್ಷೆಗೆ ನೋಟುಗಳನ್ನು ಪರಿಶೀಲಿಸುವ ಯಂತ್ರವೇ ಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಜನಸಾಮಾನ್ಯರು ಹೆಚ್ಚಾಗಿ ವಂಚನೆಗೀಡಾಗುತ್ತಾರೆ. ಹೆಚ್ಚಿನವರು ಖೋಟಾ ನೋಟಿನಿಂದ ವಂಚನೆಗೊಳಗಾದರೂ, ಬಳಿಕ ಪೊಲೀಸ್ ತನಿಖೆಯ ಭಯದಿಂದ ಅದನ್ನು ಯಾರಿಗೂ ತಿಳಿಸದೆ ಮುಚ್ಚಿಡುವುದೇ ಹೆಚ್ಚು. ಇದರಿಂದಾಗಿ ಖೋಟಾ ನೋಟು ದಂಧೆಕೋರರು ಸುಲಭವಾಗಿ ಪಾರಾಗುವಂತಾಗಿದೆ.

ಒಟ್ಟಿನಲ್ಲಿ 1000, 500 ರೂಪಾಯಿ ಪಡೆದುಕೊಳ್ಳುವಾಗ ವರ್ತಕರು ಹಾಗೂ ಜನಸಾಮಾನ್ಯರು ಹೆಚ್ಚು ಜಾಗೃತೆವಹಿಸುವ ಅಗತ್ಯವಿದ್ದು, ಇಲ್ಲದಿದ್ದರೆ ಖೋಟಾ ನೋಟು ಕೈವಶವಾಗುವ ಸಂಭವವಿದೆ. ಇನ್ನೊಂದೆಡೆ ಪೊಲೀಸರು ಕೂಡಾ ಹೆಚ್ಚಿನ ಮುತುವರ್ಜಿ ವಹಿಸಿ ಖೋಟಾ ನೋಟಾ ದಂಧೆಕೋರ ಜಾಲವನ್ನು ಬೇಧಿಸುವ ಅಗತ್ಯವಿದೆ.

Write A Comment