ಮಂಗಳೂರು,ಮಾ.29 : ರಾಜ್ಯ ಸರಕಾರದ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಕೃತಕ ಮರಳಿನ ಅಭಾವ ಸೃಷ್ಠಿಯಾಗಿದೆ ಎಂದು ಆರೋಪಿಸಿ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರು ಮಾತನಾಡಿ, ಮರಳಿನ ಕೃತಕ ಅಭಾವಕ್ಕೆ ಜಿಲ್ಲಾಡಳಿತ, ಜಿಲ್ಲೆಯ ರಾಜಕಾರಣಿಗಳು ಕಾರಣವಾಗಿದ್ದು, ಬೆಂಗಳೂರನ್ನು ಹೊರತುಪಡಿಸಿದರೆ ಅತೀ ಹೆಚ್ಚು ಕಟ್ಟಡ ನಿರ್ಮಾಣವಾಗುವುದು ಮಂಗಳೂರಿನಲ್ಲಿ. ಆದರೆ ದ.ಕ. ಜಿಲ್ಲೆಯಲ್ಲಿ ಮರಳಿನ ಅಭಾವದಿಂದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಆರೋಪಿಸಿದರು.
ಕಟ್ಟಡ ಕಾಮಗಾರಿಯಿಂದ ಜೀವನ ಮಾಡುವ ಸಾವಿರಾರು ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ, ಮಳೆಗಾಲಕ್ಕೆ ಇನ್ನೆರಡು ತಿಂಗಳು ಬಾಕಿಯಿದ್ದು, ಮಳೆಗಾಲದ ಮೊದಲೇ ಕಟ್ಟಡ ಕಾಮಗಾರಿ, ಮನೆ ಕಾಮಗಾರಿ ಮುಗಿಸಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದ್ದು, ಕಟ್ಟಡ ನಿರ್ಮಾಣ ಮಾಡಲು ಬಂದ 50,000ಕ್ಕೂ ಅಧಿಕ ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಸಿಆರ್‌ಝಡ್ ಪ್ರದೇಶದಲ್ಲಿ ಕಾಂಗ್ರೆಸಿಗರು ಮರಳು ಸಾಗಾಟದ ಗುತ್ತಿಗೆದಾರರಾಗಿದ್ದು, ಕಾಂಗ್ರೆಸಿಗರು ಹಾಗೂ ಬೆಂಬಲಿಗರು ಅಕ್ರಮವಾಗಿ ಮರಳನ್ನು ಸಾಗಿಸುತ್ತಾರೆ. ಇಲ್ಲಿಯ ಮರಳು ಅಕ್ರಮವಾಗಿ ಬೆಂಗಳೂರಿಗೂ ಸಾಗುತ್ತಿದೆ, ದಾರಿ ಮಧ್ಯೆ ಪೊಲೀಸರು ಅಕ್ರಮವಾಗಿ ಮರಳು ಸಾಗಾಟದ ವಾಹನ ನಿಲ್ಲಿಸಿದರೆ ಉಸ್ತುವಾರಿ ಸಚಿವರು ವಾಹನ ಬಿಡುವಂತೆ ಪೊಲೀಸರಿಗೆ ಆಜ್ಞೆ ಮಾಡಿ ಅಕ್ರಮ ಮರಳು ಸಾಗಾಟಗಾರರಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಾರೆ ಎಂದು ಆರೋಪಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಇತರರ ಮೇಲೆ ಗೂಬೆ ಕೂರಿಸುವ ಬದಲು ಮರಳು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಮೂಲಕ ಮರಳು ಸಾಗಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮ.ನ.ಪಾ. ವಿಪಕ್ಷ ನಾಯಕ ಸುಧೀರ್ ಶೆಟ್ಟಿ, ಉಪಮೇಯರ್ ಸುಮಿತ್ರಾ ಕರಿಯ, ಪಕ್ಷದ ಪ್ರಮುಖರಾದ ಸತೀಶ್ ಪ್ರಭು, ರೂಪಾ ಡಿ ಬಂಗೇರಾ, ಸತೀಶ್ ಕುಂಪಲ,ಸಂದೀಪ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.