ಕನ್ನಡ ವಾರ್ತೆಗಳು

ಯಕ್ಷಗಾನ ಲೋಕದ ಖ್ಯಾತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ವಿಧಿವಶ

Pinterest LinkedIn Tumblr

Mijar_annappa_died

ಮೂಡುಬಿದಿರೆ, ಎ.4: ಯಕ್ಷಗಾನ ರಂಗದ ಖ್ಯಾತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಅವರು ರವಿವಾರ ರಾತ್ರಿ ಮಿಜಾರಿನಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಸುಮಾರು 68 ವರ್ಷಗಳ ಕಾಲ ಯಕ್ಷರಂಗವನ್ನು ಹಾಸ್ಯದ ಮೂಲಕ ಆಳಿದ ಈ ಶತಮಾನದ ಅಪೂರ್ವ ಕಲಾವಿದರಾಗಿದ್ದ ಅಣ್ಣಪ್ಪರವರು ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಮೂಡಬಿದ್ರೆ ಸಮೀಪದ ಮಿಜಾರಿನ ಕುಡುಬಿ ಜನಾಂಗದಲ್ಲಿ ಹುಟ್ಟಿದ ಮಿಜಾರ್ ಅಣ್ಣಪ್ಪ ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ಅವಲಂಬಿಸಿದ್ದರು. ಯಕ್ಷಗಾನ ಹಿನ್ನೆಲೆಯಲ್ಲಿ ಬೆಳೆಯದಿದ್ದರೂ ತುಳು ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದು ಯಕ್ಷಗಾನ ಲೋಕದಲ್ಲಿ ಹಾಸ್ಯರತ್ನವೆಂದೇ ಪ್ರಸಿದ್ಧರಾಗಿದ್ದರು.

ಹಾಸ್ಯ ಚಕ್ರವರ್ತಿ, ಅಭಿನವ ತೆನಾಲಿ ಎಂದು ಅಭಿಮಾನಿಗಳಿಂದ ಬಿರುದು ಪಡೆದಿದ್ದರು. ಅಣ್ಣಯ್ಯರ ಕೋಟಿ ಚೆನ್ನಯ್ಯದ ಪಯ್ಯಬೈದ್ಯ, ಜ್ಯೋತಿಷಿ, ದೇವಪೂಜದ ಲಿಂಗಪ್ಪ ಆಚಾರಿ, ಕೋರ್ದಬ್ಬುವಿನ ಸಖನ ಪಾತ್ರಗಳು ಅಣ್ಣಪ್ಪರಿಂದಲೇ ಸೃಷ್ಟಿಯಾದಂತವು. ವಿಜಯ, ಮಕರಂದ, ದಾರುಕ, ಬಾಹುಕ ಪಾತ್ರಗಳು ಇವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು.

ಅಣ್ಣಪ್ಪ ವೇದಿಕೆಗೆ ಬಂದು ಸಂಭಾಷಣೆ ಆರಂಭಿಸುವ ಮುನ್ನವೇ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲುತ್ತಿದ್ದರು. ಅಣ್ಣಪ್ಪರಿದ್ದರೆ ಹಾಸ್ಯ ಇದ್ದೇ ಇದೆ ಎಂಬ ನಂಬಿಕೆ ಪ್ರೇಕ್ಷಕರದ್ದು. ಶುದ್ಧ ತುಳು ಭಾಷೆಯನ್ನಾಡುವ ಬೆರಳೆಣಿಕೆಯ ಕಲಾವಿದರಲ್ಲಿ ಅಣ್ಣಪ್ಪರೂ ಓರ್ವರು. ದಿವಂತಗ ಕೊರಗಶೆಟ್ಟರ ಒತ್ತಾಯದ ಮೇರೆಗೆ ಒಂದು ಬಾರಿ ಹಾಸ್ಯ ಪಾತ್ರಗಳಲ್ಲಿ ನಟಿಸಲು ಒಪ್ಪಿಕೊಂಡು ಮುಂದೆ ಆ ಪಾತ್ರಗಳೇ ಅವರ ಜನಪ್ರಿಯತೆಗೆ ಕಾರಣವಾಯಿತು.

ಅತ್ಯಂತ ಕಡುಬಡತನದ ಕುಟುಂಬದಿಂದ ಬಂದ ಅಣ್ಣಪ್ಪರು ದುಡಿಮೆಯಿಂದಲೇ ಆಸ್ತಿಗಳಿಸಿದ್ದಲ್ಲದೆ ಅತ್ಯುತ್ತಮ ಕೃಷಿಕರೆಂದು ಕೂಡಾ ಹೆಸರು ಮಾಡಿದವರು. ಇದೀಗ ಕರಾವಳಿಯ ಯಕ್ಷಗಾನ ಲೋಕದಲ್ಲಿ ಓರ್ವ ಅತ್ಯುತ್ತಮ ಹಾಸ್ಯ ನಟನನ್ನು ಕಳೆದುಕೊಂಡ ದು:ಖ ಯಕ್ಷಗಾನ ಪ್ರೇಮಿಗಳನ್ನು ಕಾಡುವುದರಲ್ಲಿ ಅನುಮಾನವಿಲ್ಲ.

Write A Comment