ಮಂಗಳೂರು, ಎ.6: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ನೂತನ ಫ್ಲೆಕ್ಸಿ ಪ್ಯಾಕ್‌ನಲ್ಲಿ ತಯಾರಾದ ‘ತೃಪ್ತಿ’ ಹಾಲು ಬಿಡುಗಡೆ ಸಮಾರಂಭ ಮಂಗಳವಾರ ಕುಲಶೇಖರ ಮಂಗಳೂರು ಡೇರಿ ಆವರಣದಲ್ಲಿ ನಡೆಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ನೂತನ ಫ್ಲೆಕ್ಸಿ ಪ್ಯಾಕ್‌ನ ‘ತೃಪ್ತಿ’ ಹಾಲು ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲೆಯಲ್ಲಿ ಹೈನುಗಾರಿಕೆಗೆ ವಿಫುಲ ಅವಕಾಶವಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಪ್ರಯೋಜನ ಪಡೆದು ಕೊಳ್ಳಬೇಕೆಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು, ಫ್ಲೆಕ್ಸಿ ಪ್ಯಾಕ್ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು. ಯಾಂತ್ರೀಕರಣದಿಂದ ವಿದೇಶದ ಜನರು ಹೈನುಗಾರಿಕೆಯಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಜಿಲ್ಲೆಯ ಸಣ್ಣ ರೈತರು ಯಾಂತ್ರೀಕರಣದ ಲಾಭ ಪಡೆದುಕೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ವೀರೇಂದ್ರ ಹೆಗ್ಗಡೆ ನಂದಿನಿ ಬ್ರಾಂಡ್‌ಗಳ ರಾಯಭಾರಿಯಾಗಬೇಕು :ಸಚಿವ ಎ.ಮಂಜು
ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಎ.ಮಂಜು ಅವರು ನೂತನ ಶೈತ್ಯಾಗಾರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಂದಿನಿ ಬ್ರಾಂಡ್‌ಗಳ ರಾಯಭಾರಿಯಾಗಬೇಕು. ಇದರಿಂದ ರೈತರಿಗೆ ಆತ್ಮಗೌರವ ತುಂಬಿದಂತಾಗುತ್ತದೆ ಎಂದು ಮಂಜು ಹೇಳಿದರು.
ಕಾರ್ಯಕ್ರಮದಲ್ಲಿ ಅರ್ಧ ಲೀಟರ್ ನಂದಿನಿ ಮಜ್ಜಿಗೆಯನ್ನು ಉದ್ಘಾಟಿಸಿ ಮಾತನಾಡಿದ ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್, ಕೆಎಂಎಫ್ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಂಟಿ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಹೈನುಗಾರಿಕೆಗೆ ಪೋತ್ಸಾಹ ಸಿಕ್ಕಿದಂತಾಗಿದ್ದು, ಹಾಲಿನ ಉತ್ಪಾದನೆ ಹೆಚ್ಚಿದೆ ಎಂದರು.
ಪದ್ಮವಿಭೂಷಣ ಪ್ರಶಸ್ತಿ ಪಡೆದ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿಯ ಅಧ್ಯಕ್ಷ ಪಿ.ನಾಗರಾಜು, ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಂಪ್ಕೊ ಲಿ.ನ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಮನಪಾ ಸದಸ್ಯ ಭಾಸ್ಕರ್ ಕೆ., ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿಯ ನಿರ್ದೇಶಕ (ಮಾರುಕಟ್ಟೆ) ರವಿಕುಮಾರ್ ಕಾಕಡೆ, ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಸಾದ್ ರಾವ್, ದ.ಕ. ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ನಾಯಕ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿ ರಾಜ್ ಹೆಗ್ಡೆ, ಸಹಕಾರಿ ಸಂಘಗಳ ಉಪನಿಬಂಧಕ ಮತ್ತು ನಿರ್ದೇಶಕ ಬಿ.ಕೆ.ಸಲೀಂ ಮತ್ತಿತರರು ಉಪಸ್ಥಿತರಿದ್ದರು.