ಮಂಗಳೂರು, ಎ.6: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆಗೆ ಸಂಬಂದಿಸಿದಂತೆ ಶಂಕಿತ ಆರೋಪಿ ಯುವ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಸೇರಿದಂತೆ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರ ಐದು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದ್ದಾರೆ
ಪತ್ರಕರ್ತರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಪಿಗಳ ಪತ್ತೆಗಾಗಿ ಈಗಾಗಲೇ ತನಿಖಾ ತಂಡ ಇತರ ರಾಜ್ಯಗಳಿಗೂ ತೆರಳಿದ್ದು, ಅಲ್ಲಿನ ಪೊಲೀಸರ ಸಹಕಾರವನ್ನೂ ಪಡೆಯಲಾಗಿದೆ. ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಹತ್ಯೆಯಲ್ಲಿ ಕೈವಾಡ ಇದೆ ಎನ್ನಲಾದ ಯುವ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈ ವಿದೇಶಕ್ಕೆ ತೆರಳಿರುವ ಬಗ್ಗೆ ಮಾಹಿತಿ ನಮಗೆ ಯಾವೂದೇ ಇಲ್ಲ ಎಂದು ಕಮಿಷನರ್ ತಿಳಿಸಿದರು.
ನರೇಶ್ ಶೆಣೈ ಬಂಧನಕ್ಕೆ ಸಂಬಂಧಿಸಿ ಯಾವುದೇ ರಾಜಕೀಯ ಒತ್ತಡ ಎದುರಿಸುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಕಮಿಷನರ್ ಚಂದ್ರಶೇಖರ್ ಹೇಳಿದರು.
ನಿರೀಕ್ಷಣಾ ಜಾಮೀನಿಗೆ ಅರ್ಜಿ..?
ನರೇಶ್ ಶೆಣೈ ಸಂಘಪರಿವಾರಕ್ಕೆ ನಿಕಟವಾಗಿದ್ದು, ಬಿಜೆಪಿಯ ಕೆಲವು ಕೇಂದ್ರ ಸಚಿವರ ನಿಕಟ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದ್ದು, ನಿರೀಕ್ಷಣಾ ಜಾಮೀನು ಪಡೆಯಲು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.