ಮಂಗಳೂರು, ಎಪ್ರಿಲ್.10 : ಮುಂಬಾಯಿಂದ ಬಂದ ಕುಟುಂಬವೊಂದು ಆಟೋ ರಿಕ್ಷಾವೊಂದರಲ್ಲಿ ಬಿಟ್ಟು ಹೋಗಿದ್ದ ಸುಮಾರು 3.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ವಾರಿಸುದಾರರಿಗೆ ತಲುಪಿಸುವ ಮೂಲಕ ಇಲ್ಲಿನ ಆಟೋ ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಸತೀಶ್ ಶೆಟ್ಟಿ ಹಾಗೂ ಅವರ ಪರಿವಾರದವರು ಇಂದು ಬೆಳಿಗ್ಗೆ ರೈಲು ಮೂಲಕ ಮುಂಬಾಯಿಂದ ಮಂಗಳೂರಿಗೆ ಆಗಮಿಸಿದ್ದು, ಬಳಿಕ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಪ್ರಿಪೈಡ್ ರಿಕ್ಷಾ ಮೂಲಕ ಅವರ ಬಾಬುಗುಡ್ಡೆಯ ಮನೆಗೆ ತೆರಳಿದ್ದರು.
ಮನೆಗೆ ತಲುಪಿದ ಬಳಿಕ ಸತೀಶ್ ಶೆಟ್ಟಿಯವರಿಗೆ ಒಂದು ಬ್ಯಾಗ್ ಅನ್ನು ರಿಕ್ಷಾದಲ್ಲೇ ಮರೆತು ಬಿಟ್ಟು ಬಂದಿರುವ ಬಗ್ಗೆ ತಿಳಿದು ಬಂದಿದೆ. ಕೂಡಲೇ ಹೊರಗೆ ಬಂದು ನೋಡಿದಾಗ ರಿಕ್ಷಾ ಅದಾಗಲೇ ಸ್ಥಳದಿಂದ ತೆರಳಿತ್ತು.
ತಕ್ಷಣ ಸತೀಶ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಬಂದು ರಿಕ್ಷಾ ಬಗ್ಗೆ ವಿಚಾರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಸತೀಶ್ ಶೆಟ್ಟಿ ಅವರು ಪ್ರಿಪೈಡ್ ಟೋಕನ್ ಅನ್ನು ಮಾರ್ಗ ಮಧ್ಯೆ ರಿಕ್ಷಾ ಚಾಲಕನಿಗೆ ನೀಡಿದ್ದರಿಂದ ಆಟೋ ರಿಕ್ಷಾ ಚಾಲಕನ ಗುರುತು ಪತ್ತೆ ಮಾಡುವುದು ಕಷ್ಟವಾಗಿತ್ತು. ತಕ್ಷಣ ತುಳುನಾಡ ರಕ್ಷಣಾ ವೇದಿಕೆ ಸದಸ್ಯರನ್ನು ಸಂಪರ್ಕಿಸಿದ ಸತೀಶ್ ಶೆಟ್ಟಿಯವರ ಕುಟುಂಬಿಕರು ಈ ಬಗ್ಗೆ ಮಾಹಿತಿ ನೀಡಿ ರಿಕ್ಷಾವನ್ನು ಪತ್ತೆ ಹಚ್ಚುವಂತೆ ಸಹಾಯ ಕೋರಿದರು.
ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ವಾಮಾಂಜೂರಿನ ಧನಂಜಯ್ ಎಂಬ ಚಾಲಕರೊಬ್ಬರು ತಮ್ಮ ರಿಕ್ಷಾದಲ್ಲಿ ಯಾರೋ ಒಂದು ಬ್ಯಾಗ್ ಬಿಟ್ಟು ಹೋಗಿದ್ದಾರೆ. ಅವರು ಅಲ್ಲಿ ಬಂದು ಈ ಬಗ್ಗೆ ವಿಚಾರಿಸಿದರೆ ತನಗೆ ತಿಳಿಸುವಂತೆ ನಮಗೆ ಮಾಹಿತಿ ನೀಡಿದ್ದಾರೆ ಎಂದು ರೈಲ್ವೇ ನಿಲ್ದಾಣದಲ್ಲಿದ್ದ ಆಟೋ ಚಾಲಕರೊಬ್ಬರು ತಿಳಿಸಿದರು.
ಕೂಡಲೇ ಧನಂಜಯ್ ಅವರಿಗೆ ಮಾಹಿತಿ ನೀಡಲಾಗಿ, ತಕ್ಷಣ ಸ್ಥಳಕ್ಕೆ ಬಂದ ಧನಂಜಯ್ ಅವರು ತಮ್ಮ ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ಬ್ಯಾಗ್ ಅನ್ನು ವಾರಿಸುದಾರರಿಗೆ ಹಿಂತಿರುಗಿಸಿದ್ದಾರೆ. ಬ್ಯಾಗ್‌ನಲ್ಲಿ ಚಿನ್ನಾಭರಣ,ಮೊಬೈಲ್ ಫೋನ್, ಎಟಿಎಂ ಕಾರ್ಡ್ ಮತ್ತು ನಗದು ಸೇರಿ ಸುಮಾರು ಮೂರುವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಸೊತ್ತುಗಳಿದ್ದವು ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಧನಂಜಯ್ ಅವರಿಗೆ ಸತೀಶ್ ಶೆಟ್ಟಿ ಮತ್ತು ಅವರ ಕುಟುಂಬಸ್ಥರು ಸೂಕ್ತ ಬಹುಮಾನ ನೀಡಿ ಗೌರವಿಸಿದರು. ತುಳುನಾಡ ರಕ್ಷಣಾ ವೇದಿಕೆ ಸದಸ್ಯರು ಧನಂಜಯ್ ಅವರ ಪ್ರಾಮಾಣಿಕ ಸೇವೆಗೆ ಅಭಿನಂದನೆ ಸಲ್ಲಿಸಿದರು.