ಮಂಗಳೂರು, ಏ.11: ನಾಥೂರಾಮ್ ಗೋಡ್ಸೆ ಕ್ರಾಂತಿಕಾರಿ ದೇಶಭಕ್ತ. ಅವರನ್ನು ದೇಶದ್ರೋಹಿ, ಖಳನಾಯಕರಂತೆ ಬಿಂಬಿಸಲಾಗುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಶಾಲಾ- ಕಾಲೇಜುಗಳಲ್ಲಿ ಗೋಡ್ಸೆಯ ದೇಶಭಕ್ತಿಯ ವಿಚಾರವನ್ನು ಯಾರೂ ಹೇಳುತ್ತಿಲ್ಲ.
ಬದಲಾಗಿ ಅವರ ಇನ್ನೊಂದು ಮಗ್ಗುಲನ್ನೇ ವಿದ್ಯಾರ್ಥಿಗಳಿಗೆ ಹೇಳಲಾಗುತ್ತಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರಾಧ್ಯಕ್ಷ ಚಂದ್ರಪ್ರಕಾಶ್ ಕೌಶಿಕ್ ತಿಳಿಸಿದರು.
ಅವರು ಜೋಗಿಮಠದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಗಾಂಧೀಜಿಯಿಂದಲೂ ಹಲವು ತಪ್ಪುಗಳಾಗಿದ್ದು, ಈ ಸತ್ಯವನ್ನು ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ. ದೇಶದ ಶಿಕ್ಷಣ ಪದ್ದತಿಯಲ್ಲಿ ದೇಶಪ್ರೇಮಿಗಳ ಬದಲು, ಇತಿಹಾಸ ತಿರುಚುವ ಪಾಠ ಬೋಧಿಸಲಾಗುತ್ತಿದೆ. ನರೇಂದ್ರ ಮೋದಿಯವರ ಆಡಳಿತದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆಯೇ ಗೊತ್ತಿಲ್ಲ, ಆದರೆ ಒಂದಲ್ಲ ಒಂದು ದಿನ ಮಂದಿರ ನಿರ್ಮಾಣವಾಗಿಯೇ ಸಿದ್ದ. ಅಯೋಧ್ಯೆ ವಿಚಾರದಲ್ಲಿ ಮೊಟ್ಟ ಮೊದಲ ಬಾರಿಗೆ ಹಿಂದೂ ಮಹಾ ಸಭಾ ಕೋರ್ಟ್ ಮೆಟ್ಟಿಲೇರಿತ್ತು ಎಂದು ಕೌಶಿಕ್ ತಿಳಿಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಅಂಬಿಕಾ ನಾಯಕ್, ಕಂಬಳದ ಓಟದಲ್ಲಿ ಎತ್ತುಗಳಿಗೆ ಬಡಿದರೆ ಪ್ರಾಣಿ ಹಿಂಸೆಯಾಗುತ್ತದೆ. ಆದರೆ ಕಸಾಯಿಖಾನೆಯಲ್ಲಿ ದನ ಎತ್ತು ಕಡಿಯುವುದು ಪ್ರಾಣಿ ಹಿಂಸೆ ಎಂದು ಭಾಸವಾಗದಿರುವುದು ದುರಂತ. ದನಗಳ ರಕ್ಷಣೆಗಾಗಿ ಎಲ್ಲಾ ಮಠಗಳು ಗೋಶಾಲೆ ನಿರ್ಮಿಸಿಕೊಡಲು ಮುಂದಾಗಬೇಕು.
ಹಿಂದೂ ಮಹಾ ಸಭಾದ ಕಾರ್ಯಕರ್ತರು ವಾರಕ್ಕೊಮ್ಮೆ ಬಂದು ಸೇವೆಯ ರೂಪದಲ್ಲಿ ರಕ್ಷಿಸಲ್ಪಟ್ಟ ಹಾಗೂ ಇತರೆ ದನಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ. ಇದರಿಂದ ಸರಿಯಾದ ರೀತಿಯಲ್ಲಿ ದನಗಳ ರಕ್ಷಣೆ ಸಾಧ್ಯ ಎಂದು ಅವರು ತಿಳಿಸಿದರು.