ಮಂಗಳೂರು,ಏ.12: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ವಿಭಾಗದಲ್ಲಿ ಇ-ವೀಸಾ ದಾಖಲೆಗಳ ಪರಿಶೀಲನೆ ವ್ಯವಸ್ಥೆ ಇಲ್ಲದ ಕಾರಣ ಬೆಲ್ಜಿಯಂನಿಂದ ಉಡುಪಿಯ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಮಹಿಳೆ ಸೋಮವಾರ ವಿಮಾನ ನಿಲ್ದಾಣದಿಂದ ಹೊರಗೆ ಬರಲು ಸಾಧ್ಯವಾಗದೆ ವಾಪಸಾದ ಘಟನೆ ನಡೆದಿದೆ.
ವಿದೇಶಿ ಮಹಿಳೆಯೊರ್ವರು ಇ-ವೀಸಾದೊಂದಿಗೆ ಬೆಲ್ಜಿಯಂನಿಂದ ದುಬಾಯಿ ಮೂಲಕ ಜೆಟ್ ಏರ್‌ವೇಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದರು. ಆದರೆ ಆಕೆಯ ಬಳಿ ಇದ್ದ “ವೀಸಾ ಆನ್ ಅರೈವಲ್’ನ್ನು ಪರಿಶೀಲಿಸುವ ಸೌಲಭ್ಯ ಇಲ್ಲಿನ ಇಮಿಗ್ರೇಶನ್ ವಿಭಾಗದಲ್ಲಿ ಇಲ್ಲದ ಕಾರಣ ಇಮಿಗ್ರೇಶನ್ ಅಧಿಕಾರಿಗಳು ಆಕೆಯನ್ನು ನಿಲ್ದಾಣದ ಹೊರಗೆ ಹೋಗಲು ಬಿಡಲಿಲ್ಲ. ಕೊನೆಗೆ ಅಕೆಗೆ ವಿಮಾನ ನಿಲ್ದಾಣದ ಒಳಗೇ ಉಳಿಸಿ ಅದೇ ವಿಮಾನದಲ್ಲಿ ದುಬಾಯಿಗೆ ಹಿಂದಿರುಗಬೇಕಾಯಿತು.
ಇ-ವೀಸಾ ಎನ್ನುವುದು ಎಲೆಕ್ಟ್ರಾನಿಕ್ ತಂತ್ರಜ್ಞಾನದ ಮೂಲಕ ನೀಡಲಾಗುವ ವೀಸಾ. ಇದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕವೇ ವೀಸಾ ಮಂಜೂರಾಗುತ್ತದೆ. ಇಲ್ಲಿ ಸಮಯ ಮತ್ತು ಕಾಗದದ ಉಳಿತಾಯ ಆಗುವುದು ಮಾತ್ರವಲ್ಲದೆ ಹೆಚ್ಚು ಭದ್ರತೆ ಹೊಂದಿರುತ್ತದೆ.
ಬೆಂಗಳೂರು, ಚೆನ್ನೈ, ಕೊಚಿನ್, ದಿಲ್ಲಿ, ಗೋವಾ, ಹೈದರಾಬಾದ್, ಕೊಲ್ಕತ್ತಾ, ಮುಂಬಯಿ ಮತ್ತು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಇ-ವೀಸಾ ಪರಿಶೀಲನೆ ವ್ಯವಸ್ಥೆ ಇದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಿದ್ದರೂ ಇಲ್ಲಿ ಈ ಸೌಲಭ್ಯವನ್ನು ಇನ್ನೂ ಕಲ್ಪಿಸಲಾಗಿಲ್ಲ.