ಮಂಗಳೂರು,ಏ.14: ಸರಿ ಸುಮಾರು 1,200 ವರ್ಷಗಳ ಇತಿಹಾಸವಿರುವ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜಿರ್ಣೋದ್ದಾರ ಕಾಮಗಾರಿ ಅಂತಿಮ ಹಂತದಲ್ಲಿದ್ದು ಪುನಃ ಪ್ರತಿಷ್ಠೆ -ಅಷ್ಟಬಂಧ – ಬ್ರಹ್ಮಕಲಶೋತ್ಸವ ಸಮಾರಂಭವು ಎ.17 ರಿಂದ 25ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸುಮಾರು 18 ಕೋಟಿ ರೂ ವೆಚ್ಚದಲ್ಲಿ ದಾರುಶಿಲ್ಪ ಮತ್ತು ಶಿಲೆ ಕಲ್ಲಿನ ಶಿಲ್ಪಗಳೊಂದಿಗೆ ತುಳುನಾಡ ಶೈಲಿಯಲ್ಲಿ ದೇವಸ್ಥಾನವು ಆಕರ್ಷಕವಾಗಿ ಮೂಡಿ ಬರುತ್ತಿದೆ.
ನಾಲ್ಕು ವರ್ಷಗಳ ಹಿಂದೆ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಿ ವಾಸ್ತು ಶಿಲ್ಪಿ ಮುನಿಯಂಗಳ ಮಹೇಶ್ ಅವರ ಮಾರ್ಗದರ್ಶನದಲ್ಲಿ ದಾರು ಶಿಲ್ಪಿಕಲ್ಲ ಮುಂಡ್ಕೂರು ನಾರಾಯಣ ಆಚಾರ್ ಮತ್ತು ಶಿಲೆಕಲ್ಲು ಶಿಲ್ಪಿ ನಾರಾಯಣ ಅವರ ನೇತೃತ್ವದಲ್ಲಿ ವಿಶಿಷ್ಟವಾಗಿ ಮತ್ತು ಸುಂದರವಾಗಿ ರೂಪುಗೊಳ್ಳುತ್ತಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಏ.17ರಂದು ಉಗ್ರಾಣ ಮುಹೂರ್ತ ನೆರೆವೇರಲಿದೆ. ಎ 22 ರಂದು ಪ್ರತಿಷ್ಠೆ 25 ರಂದು ಬ್ರಹ್ಮಕಲಶ ಹಾಗೂ 269 ರಂದು ದೈವಗಳಿಗೆ ನೇಮೋತ್ಸವ ಜರಗಲಿದೆ ಎಂದರು.
48 ತಿಂಗಳು ಕಾಮಗಾರಿ ಪೂರ್ಣಗೊಂಡಿದೆ. ಕಳೆದ 2 ವರ್ಷಗಳಲ್ಲಿ 20,000 ಕ್ಕೂ ಹೆಚ್ಚು ಮಂದಿ ಕರ ಸೇವೆ ಮಾಡಿದ್ದಾರೆ. ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಸುಮಾರು 10ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಈ ದೇವಸ್ಥಾನವನ್ನು ಸೇರ್ಪಡೆಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಪ್ರತಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ಕೆ.ಪಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ, ಕೋಶಾಧಿಕಾರಿ ಜೆ. ಬಾಲಕೃಷ್ಣ ಕೊಟ್ಟಾರಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಎಂ.ನಾವರ ಮತ್ತು ದಿವಾಕರ ಸಾಮಾನಿ ಮುಂತಾದವರು ಉಪಸ್ಥಿತರಿದ್ದರು.