ಮಂಗಳೂರು,ಏ.14: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2016 ಎಪ್ರಿಲ್ 16 ರ ಶನಿವಾರದಂದು ಅಪರಾಹ್ನ 2 ಗಂಟೆಗೆ “ಬ್ಯಾರಿ ಯುವ ಬರಹಗಾರರು-ಕಲಾವಿದರ ಸಮ್ಮಿಲನ” ಹಾಗೂ ಸಂಜೆ 4.45 ರಿಂದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ”ವನ್ನು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿದೆ.
ಸಂಜೆ 4.45 ಕ್ಕೆ ನಡೆಯುವ ಗೌರವ ಪ್ರಶಸ್ತಿ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯ ಮಾಡಲಿರುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶ್ರೀಮತಿ ಉಮಾಶ್ರೀ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಇಲಾಖಾ ಸಚಿವರಾದ ಬಿ. ರಮಾನಾಥ ರೈಯವರು ೨೦೧೫ರ ಗೌರವ ಪ್ರಶಸ್ತಿ ಪುರಸ್ಕೃತರಾದ 1) ಬಿ.ಎಂ. ಹನೀಫ್, 2) ಮೊಹಮ್ಮದ್ ಅಲಿ ಉಚ್ಚಿಲ್, ಅಬುಧಾಬಿ, 3) ಮಹಮ್ಮದ್ ಕೆ. ಮಠ ಉಪ್ಪಿನಂಗಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು. 2008ರಲ್ಲಿ ಸ್ಥಾಪನೆಯಾದ ಬ್ಯಾರಿ ಸಾಹಿತ್ಯ ಅಕಾಡೆಮಿಯು 2014ರವರೆಗೆ ಒಟ್ಟು 21 ಮಂದಿಗೆ ಈಗಾಗಲೇ ಗೌರವ ಪ್ರಶಸ್ತಿ ನೀಡಿದ್ದು, 2015ರ ಸಾಲಿಗೆ ಮೇಲೆ ಹೇಳಲಾದ ಮೂರು ಮಂದಿಯನ್ನು ಆಯ್ಕೆ ಮಾಡಿದೆ.
ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಯಾಕುಬ್ ಖಾದರ್ ಗುಲ್ವಾಡಿಯವರಿಗೆ ಡಾ| ವಹಾಬ್ ದೊಡ್ಡಮನೆ ಸ್ಮಾರಕ ‘ಬ್ಯಾರಿ ಅಧ್ಯಯನ ಪ್ರಶಸ್ತಿ’ ಪ್ರದಾನವನ್ನು ಮಾಡಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರಾದ ಯು.ಟಿ. ಖಾದರ್‌ರವರು ಶ್ರೀಮತಿ ಮರಿಯಮ್ ಇಸ್ಮಾಯಿಲ್ ಉಳ್ಳಾಲಬೈಲ್ ಇವರಿಗೆ ಡಾ| ಸುಶೀಲಾ ಪಿ. ಉಪಾಧ್ಯಾಯ ಸ್ಮಾರಕ ‘ಬ್ಯಾರಿ ಮಹಿಳಾ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಿರುವರು.
ಯುವಜನ ಸೇವೆ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವರಾದ ಕೆ. ಅಭಯಚಂದ್ರ ಜೈನ್‌ರವರು ವಸ್ತು ಪ್ರದರ್ಶನಕ್ಕೆ ಚಾಲನೆಯನ್ನು ನೀಡಲಿರುವರು. ಶಾಸಕರು ಹಾಗೂ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಜೆ.ಆರ್. ಲೋಬೋರವರು ಪುಸ್ತಕ ಪ್ರದರ್ಶನಕ್ಕೆ ಚಾಲನೆಯನ್ನು ನೀಡಲಿರುವರು.
ಮಂಗಳೂರು ಲೋಕಸಭಾ ಕ್ಷೇತ್ರದ ಶಾಸಕರಾದ ನಳಿನ್ ಕುಮಾರ್ ಕಟೀಲ್ ಬೆಲ್ಕಿರಿ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್‌ರವರು ವಹಿಸಲಿರುವರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎ. ಮೊದಿನ್ ಬಾವಾ, ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್ ಹಾಗೂ ಐವನ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಎಮ್. ಹರಿನಾಥ್, ಮಾಜಿ ಉನ್ನತ ಶಿಕ್ಷಣ ಸಚಿವರಾದ ಬಿ.ಎ.ಮೊಹಿದಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎ. ದಯಾನಂದ, ದ.ಕ.ಜಿಲ್ಲಾ ಪಂಚಾಯತ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗೌರವ ಪ್ರಶಸ್ತಿ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಪರಾಹ್ನ2.00 ಗಂಟೆಗೆ ಬ್ಯಾರಿ ಯುವ ಬರಹಗಾರರು-ಕಲಾವಿದರ ಸಮ್ಮಿಲನ ನಡೆಯಲಿದ್ದು, ಪತ್ರಕರ್ತ ಬಿ.ಎಮ್. ಬಶೀರ್ ದಿಕ್ಸೂಚಿ ಭಾಷಣವನ್ನು ಮಾಡಲಿದ್ದು, ಶೈಕ್ಷಣಿಕ ಸಲಹೆಗಾರ ಯು.ಹೆಚ್. ಖಾಲಿದ್ ಉಜಿರೆ ಅಧ್ಯಕ್ಷತೆಯನ್ನು ವಹಿಸಲಿರುವರು.
ಹಂಝ ಮಲಾರ್‌ರವರು “ಯುವ ಪ್ರತಿಭೆಗಳು ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿ” ಬಗ್ಗೆ ವಿಷಯ ಮಂಡಿಸಲಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗುಂದ ಶುಭಾಶಂಸನೆಯನ್ನು ಮಾಡಲಿರುವರು.
ಶಂಶೀರ್ ಬುಡೋಳಿ, ಮುಆದ್ ಗೋಳ್ತಮಜಲು, ಕಲಂದರ್ ಬಜ್ಪೆ (ಕ-ಶಿಕ), ಶಂಶಾದ್ ಜಲೀಲ್ ಮುಕ್ರಿ, ಸರ್ಫ್ರಾಝ್ ಮಂಗಳೂರು, ನಿಝಾಮ್ ಕೊಳಂಬೆ ಬ್ಯಾರಿ ಕವನ ವಾಚಿಸಲಿದ್ದು, ಜಲೀಲ್ ಮುಕ್ರಿ, ಸತ್ತಾರ್ ಗೂಡಿನಬಳಿ, ಶಹೀದಾ ಉಪ್ಪಿನಂಗಡಿ, ರಶೀದ್ ನಂದಾವರ ಬ್ಯಾರಿ ಚುಟುಕು ಮಂಡಿಸಲಿದ್ದಾರೆ. ಶೌಕತ್ ಪಡುಬಿದ್ರಿ, ಶಮೀರ್ ಮುಲ್ಕಿ, ಶರೀಫ್ ಬೆಳ್ಳಾರೆ, ಬದ್ರುದ್ದೀನ್ ವಿಟ್ಲ, ಇಬ್ರಾಹಿಂ ಕಡಂಬು ಇವರುಗಳಿಂದ ಬ್ಯಾರಿ ಗಾಯನ ನಡೆಯಲಿದೆ.
ಇಸ್ಮತ್ ಫಜೀರ್, ಅಬ್ದುಲ್ ರಝಾಕ್ ಅನಂತಾಡಿ, ಅನ್ಸಾರ್ ಇನೋಳಿ, ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ ಇವರುಗಳು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬೆಳವಣಿಗೆಗಳ ಬಗ್ಗೆ ಅಂತರಾಳದ ಮಾತುಗಳನ್ನಾಡಲಿರುವರು.
ಅಶ್ರಫ್ ಅಪೊಲೊ, ಹೈದರ್ ನಾರ್ಶ, ಶರೀಫ್ ಬೊಳಂತೂರು, ಝಿಯಾದ್ ಕಲ್ಲಡ್ಕ, ಶರೀಫ್ ಪರ್ಲ್ಯ, ಆರಿಫ್ ಸಂಪ್ಯ, ಸಿದ್ದೀಕ್ ಮಂಚಿ, ತಾಜುದ್ದೀನ್ ಅಮ್ಮುಂಜೆ, ಸಫ್ವಾನ್ ಸಾಲೆತ್ತೂರು ಇವರುಗಳಿಂದ ಬ್ಯಾರಿ ಜಾನಪದ ಗೀತೆಗಳ ಗಾಯನ ನಡೆಯಲಿದ್ದು, ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ದಫ್ ಪ್ರದರ್ಶನ ಕೂಡಾ ನಡೆಯಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಸಾಹಿತಿಗಳು ಹಾಗೂ ಕವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಬ್ಯಾರಿ ಸಾಹಿತ್ಯ ಅಕಾಡೆಮಿ ವಿನಂತಿಸಿಕೊಳ್ಳುತ್ತದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರರಾದ ಬಿ.ಎ. ಮುಹಮ್ಮದ್ ಹನೀಫ್ , ಉಮರಬ್ಬ ರಿಜಿಸ್ಟ್ರಾರ್ ,ಶ್ರೀಮತಿ ಝೊಹರಾ ಅಬ್ಬಾಸ್, ಸದಸ್ಯರುಗಳಾದ, ಅಬ್ದುಲ್ ಹಮೀದ್ ಗೋಳ್ತಮಜಲು,ಯೂಸುಫ್ ವಕ್ತಾರ್,ಅಬ್ದುಲ್ ಹಮೀದ್ ಪಡುಬಿದ್ರಿ,ಅಬ್ದುಲ್ ಲತೀಫ್ ನೇರಳಕಟ್ಟೆ,ಮುಹಮ್ಮದ್ ಝಕಾರಿಯಾ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.