ಕುಂದಾಪುರ: ಅತೀ ವೇಗದಿಂದ ಸಾಗಿಬಂದ ಟಿಪ್ಪರ್ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿ ಸಮೀಪದ ಅಂಗಡಿಯೊಂದಕ್ಕೆ ನುಗ್ಗಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಹೆಮ್ಮಾಡಿ ಸಮೀಪದ ಸುಳ್ಸೆ ಟಪ್ಪಾಲುಮನೆ ಎಂಬಲ್ಲಿ ನಡೆದಿದೆ.
ಕುಂದಾಪುರ-ಬೈಂದೂರು ಚತುಷ್ಪತ ಕಾಮಗಾರಿ ನಡೆಸುತ್ತಿರುವ ಕಂಪೆನಿಯೊಂದರ ಟಿಪ್ಪರ್ ವಾಹನ ಇದಾಗಿದೆ ಎನ್ನಲಾಗಿದೆ.
ಘಟನೆ ವಿವರ: ಶನಿವಾರ ತಡರಾತ್ರಿ ವಂಡ್ಸೆ ಕಡೆಯಿಂದ ಹೆಮ್ಮಾಡಿ ಮಾರ್ಗದತ್ತ ಸಾಗುತ್ತಿದ್ದ ಈ ಟಿಪ್ಪರ್ ವಾಹನ ಸುಳ್ಸೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಟೈಲರ್ ಅಂಗಡಿಗೆ ನುಗ್ಗಿದೆ. ಇದರಿಂದಾಗಿ ಅಂಗಡಿಯಲ್ಲಿದ್ದ ಟೈಲರಿಂಗ್ ಮೆಶಿನ್, ಮೋಟಾರುಗಳು ಸೇರಿದಂತೆ ವಿವಿಧ ಪರಿಕರಗಳು ಹಾನಿಗೊಳಗಾಗಿದ್ದಲ್ಲದೇ ಸಂಪೂರ್ಣ ಅಂಗಡಿ ಕಟ್ಟಡ ಧರೆಗುರುಳಿದೆ.
ತಪ್ಪಿದ ಬಾರೀ ದುರಂತ…
ಚಾಲಕ ಅಜಾರುಗತೆಯ ಚಾಲನೆಯಿಂದ ನಿಯಂತ್ರಣ ತಪ್ಪಿದ ಟಿಪ್ಪರ್ ವಾಹನ ನೇರವಾಗಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಅಂಗಡಿಗೆ ತಾಗಿಕೊಂಡಂತೆ ಟಪ್ಪಾಲುಮನೆ ಬಾಬುರಾಯ ಅವರ ನಿವಾಸ ಹಾಗೂ ಜಾನುವಾರುಗಳಿರುವ ಕೊಟ್ಟಿಗೆಯಿತ್ತು. ಅಂಗಡಿಗೆ ಡಿಕ್ಕಿಹೊಡೆದ ಟಿಪ್ಪರ್ ಅಲ್ಲಿಯೇ ನಿಂತ ಪರಿಣಾಮ ಸಂಭವನೀಯ ಅವಘಡ ತಪ್ಪಿದಂತಾಗಿದೆ.
ಅಪಘಾತದ ಪರಿಣಾಮ ಮನೆಯವರಿಗೆ ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ.