ಕಲ್ಲಡ್ಕ,ಎ.21: ಮಹಾತ್ಮಾ ಗಾಂಧೀಜಿ ಕನಸು ಕಂಡಿದ್ದ ‘ಗ್ರಾಮ ರಾಜ್ಯದಿಂದ ರಾಮರಾಜ್ಯ’ ನಿರ್ಮಿಸುವ ಮೂಲಕ ಜಗತ್ತಿಗೆ ಗುರುವಿನಂತೆ ಬೆಳೆಯುತ್ತಿರುವ ಭಾರತದಲ್ಲಿ ಶ್ರೀರಾಮನನ್ನು ಟೀಕಿಸುವ ವಿಘ್ನಸಂತೋಷಿಗಳಿಗೆ ಸೂಕ್ತ ಉತ್ತರ ನೀಡುವ ಅನಿವಾರ್ಯತೆ ಎದುರಾಗಿದೆ. ಆ ಮೂಲಕ ತುಷ್ಠೀಕರಣ ನೀತಿ ಅನುಸರಿಸುತ್ತಿರುವ ನಕಲಿ ಜಾತ್ಯಾತೀತ ರಾಜಕಾರಣಿಗಳಿಗೂ ತಕ್ಕ ಪಾಠ ಕಲಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಉಪನ್ಯಾಸ ನೀಡಿ, ಕಲ್ಲಡ್ಕ ಶ್ರೀರಾಮ ಮಂದಿರ ಲೋಕಾರ್ಪಣೆ ಮೂಲಕ ಶೀಘ್ರವೇ ಅಯೋಧ್ಯೆ ಶ್ರೀ ರಾಮ ಮಂದಿರ ಮತ್ತು ಮಥುರಾ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಮುನ್ನುಡಿಯಾಗಲಿದೆ ಎಂದರು.
ದೇಶದಲ್ಲಿ ಸಮರ್ಥ ನಾಯಕತ್ವದಿಂದ ವಿದೇಶೀಯರೂ ತಲೆಬಾಗುವಂತಾಗಿದೆ. ಕೆಲವೊಂದು ರಾಜಕಾರಣಿಗಳು ಜಾತಿ ಮತ್ತು ಮಹಿಳೆಯರು ದೇವಸ್ಥಾನ ಪ್ರವೇಶ ನೆಪದಲ್ಲಿ ಹಿಂದುತ್ವ ದೊಳಗೆ ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಇಂಡೋನೇಶಿಯಾ, ಥಾಯ್ಲೆಂಡ್ ಬಾಲಿ ಮತ್ತಿತರ ರಾಷ್ಟ್ರಗಳಲ್ಲಿ ಶ್ರೀರಾಮನೇ ಆದರ್ಶವಾಗಿದ್ದರೂ ಈ ದೇಶದಲ್ಲಿ ರಾಮ-ಸೀತೆಯರ ಬಗ್ಗೆ ಅವಹೇಳನ ಮಾಡುತ್ತಿರುವುದು ನಾಚಿಕೆಗೇಡು ಎಂದರು.
ವಿಎಚ್ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಮತ್ತು ಕರಾವಳಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಗಣೇಶ ರಾವ್ ಶುಭ ಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಉದ್ಯಮಿ ಲಕ್ಷ್ಮೀನಾರಾಯಣ ಬೈಂದೂರು, ಬಿ.ರಘುನಾಥ ಸೋಮಯಾಜಿ, ಬಿ.ಗಣೇಶ ಸೋಮಯಾಜಿ, ಪ್ರಮುಖರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿತೇಂದ್ರ ಎಸ್.ಕೊಟ್ಟಾರಿ ಮತ್ತಿತರರು ಇದ್ದರು.
ಸಮಿತಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭಜನಾ ಮಂದಿರ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ವಂದಿಸಿದರು. ವಕೀಲೆ ಆಶಾ ಪ್ರಸಾದ್ ರೈ ಮತ್ತು ಬಿ.ದೇವದಾಸ ಶೆಟ್ಟಿ ನಿರೂಪಿಸಿದರು.