ಓರ್ವ ಕವಿಯ ಮಹತ್ವವು ಅವನ ಬರವಣಿಗೆಯಲಿರುತ್ತದೆ. ಅದು ಅವನ ಬದುಕಿನ ಒಂದು ಚಟುವಟಿಕೆಯಾದಗ ಅದಕ್ಕೆ ಮಹತ್ವ ಬರುತ್ತದೆ. , ಸಾಹಿತ್ಯ ಅದೃಶ್ಯದಿಂದ ದೃಶ್ಯದ ಕಡೆ , ಅಶ್ರಾವ್ಯದಿಂದ ಶ್ರಾವ್ಯದ ಕಡೆಗೆ ಮನುಷ್ಯನನ್ನು ಸೆಳೆಯುತ್ತದೆ. ಹೊಸ ಸಾಹಸಕ್ಕೆ ಸಿದ್ಧಮಾಡುತ್ತದೆ. ಚಿತ್ತ ಮತ್ತು ಚಿತ್ತು (ಕಾರ್ಯ) ಇಲ್ಲದೆ, ವಿಷಯ ಗ್ರಹಿಸುವಿಕೆ ಅಸಾಧ್ಯ .
ಜೋಕಟ್ಟೆಯವರು ಎಲ್ಲಾ ವಿಷಯಗಳನ್ನು ಗ್ರಹಿಸಿ ಅಂಕಣಗಳನ್ನು ಬರೆದರು. ನಂಬಿಕೆಯಿಂದ ಚರಿತ್ರೆಯ ದೃಶ್ಯ ಕಟ್ಟಿಕೊಡುತ್ತದೆ. ಸಂದರ್ಶನ ಎಂತಹ ಕೆಲಸ ಮಾಡುತ್ತದೆ ಎಂದು ಜೋಕಟ್ಟೆ ಲೇಖನಗಳಲ್ಲಿ ತೋರಿಸಿ ಕೊಟ್ಟಿದ್ದಾರೆ. ಈ ಕಾಲದಲ್ಲಿ ನಂಬಿಕೆ ಮುಖ್ಯವಾದುದಲ್ಲ ಹೊರ ನೋಟ ಸುಂದರವಾಗಿದ್ದರೂ ಒಳಹೊಕ್ಕು ನೋಡಿದರೆ ಯತಾರ್ಥ ಅರಿವಾಗುವದು ಎಂದು ಖ್ಯಾತ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಯವರು ಅಭಿಪ್ರಾಯ ಪಟ್ಟರು.
ಅವರು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ದಿನಾಂಕ 16 ಎಪ್ರಿಲ್ ರಂದು ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 23ನೇ ಕೃತಿ ಶ್ರೀರಾಮ ಪ್ರಕಾಶನ, ಮಂಡ್ಯ ಪ್ರಕಾಶಿತ ಡ್ರ್ಯಾಗನ್ ಮತ್ತು ಗಂಗಾಜಲ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಕವಿಗೆ ಕ್ರಾಂತಿಯೆಡೆಗೆ ಒಯ್ಯುವ ಪ್ರಾವಿಣ್ಯತೆ ಇದೆ. ಸಿದ್ಧಾಂತಕ್ಕೆ ಬದ್ದವಾದದ್ದು ಬರೆಯಬೇಕು.
ಪ್ರವಾಸ ಲೇಖನ ಮುಖ್ಯವಾಗಿ, ಚಾರಿತ್ರಿಕೆ ಹಿನ್ನೆಲೆ ಅರಿತರೆ ಮಾತ್ರ ಅರ್ಥಗರ್ಭಿತ ಬರೆವಣಿಗೆಯಾಗಲು ಸಾಧ್ಯ. ವಾಸ್ತವಿಕತೆ ಮತ್ತು ಪ್ರಾಮಾಣಿಕತೆ ಲೇಖನಗಳಲ್ಲಿರಬೇಕು. ಒಳಗಿನ ಸುಳಿವುಗಳೇನು? , ಅದರ ಹಿಂದೆ ಏನಿದೆ ಈ ಶೋಧನೆ ಬಹಳ ಮುಖ್ಯ. ಶ್ರೀನಿವಾಸ ಜೋಕಟ್ಟೆಯವರ ಕೃತಿ ಡ್ರ್ಯಾಗನ್ ಮತ್ತು ಗಂಗಾಜಲ ಇಂತಹ ಪುಸ್ತಕಗಳಲ್ಲೊಂದು. ಇಂತಹ ಪುಸ್ತಕಗಳು ಇನ್ನೂ ಪ್ರಕಟಗೊಳ್ಳಬೇಕು ಎಂದು ಹೇಳಿ ಡಾ. ಸುನೀತಾ ಎಂ. ಶೆಟ್ಟಿ ಅವರು ಜೋಕಟ್ಟೆ ಅವರನ್ನು ಅಭಿನಂದಿಸಿದರು.
ಕೃತಿ ಬಿಡೆಗಡೆ ಗೊಳಿಸಿದ ಖ್ಯಾತ ಕವಿ, ಲೇಖಕ, ಚಿಂತಕರಾದ ಮೋಹನ್ ನಾಗಮ್ಮನವರ ಮಾತನಾಡುತ್ತಾ ಯಾವ ಪತ್ರಿಕೆಯಲ್ಲಿ ಜೋಕಟ್ಟೆ ಬರೆದರೂ ಮಾಹಿತಿ ಪೂರ್ಣವಾಗಿರುತ್ತದೆ. ಸಂಯಮದಿಂದ ಬರೆಯುವ ಗುಣ, ಅಂಕಣಗಾರರಿಗೆ ಇರುವ ಸ್ಥಿತಪ್ರಜ್ಞತೆ ಇವರಲ್ಲಿದೆ.. ಪಾರಂಪರಿಕ ಸಾಂಸ್ಕೃತಿಕವಾದ ವೈಭವ ಅವರ ಲೇಖನಗಳಲ್ಲಿ ಕಾಣುತ್ತದೆ. ಹೂವಿನ ಮಾಲೆಯಲ್ಲಿ ವಿವಿಧ ಬಣ್ಣದ ಹೂಗಳನ್ನು ಪೋಣಿಸಿದಂತೆ ಅವರ ಲೇಖಗಳು ಇರುತ್ತದೆ. ನಗರದ ಸೂಕ್ಷ್ಮತೆಗಳನ್ನೊಳಗೊಂಡಿದ್ದು, ಕಾಲದ ಇತಿಹಾಸವನ್ನು ಕಟ್ಟಿಕೊಳ್ಳುವ ಅಪೂರ್ವ ಶಿಸ್ತು ಅವರ ಬರವಣಿಗೆಯಲ್ಲಿದೆ. ಅಂಕಣದ ಬರಹದ ಮಹತ್ವವನ್ನು ಅರಿತವರು, ಮಾಹಿತಿಯನ್ನು ವಿನಿಮಯ ಮಾಡುವ ಕಲೆ ಅವರ ಬರವಣಿಗೆಯಲ್ಲಿದೆ ಎಂದು ಹೇಳಿದರು.
ದುರ್ಗಪ್ಪ ಕೋಟಿಯವರ್ ಕೃತಿ ಪರಿಚಯ ಮಾಡುತ್ತಾ. ಸಮಕಾಲೀನ, ಸಂಘಟನೆಗಳ, ಪ್ರವಾಸ ಲೇಖನಗಳಿಂದ ಕೂಡಿದ 30 ಅರ್ಥ ಪೂರ್ಣಲೇಖನಗಳನ್ನೊಳಗೊಂಡಿದೆ ಎಂದು ಪ್ರತಿಯೊಂದು ಲೇಖನಗಳ ವಿಶೇಷತೆಗಳನ್ನು ತಿಳಿಸಿದರು.
ಕೃತಿಕಾರ ಶ್ರೀನಿವಾಸ ಜೋಕಟ್ಟೆಯವರು ತನ್ನ ಲೇಖನಗಳನ್ನು ಪ್ರಕಟಿಸಲು ಅವಕಾಶ ಮಾಡಿಕೊಟ್ಟವರಿಗೆಲ್ಲ ಕೃತಜ್ಞತೆಯನ್ನು ಸಲ್ಲಿಸಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನಿಕಿತಾ ಎಸ್. ಅಮೀನ್ ಅವರ ಪ್ರಾರ್ಥನೆಯಿಂದ ಕಾರ್ಯಕ್ರಮವು ಆರಂಭಗೊಂಡಿತು. ಸಂಘದ ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಪ್ರಸ್ತಾವನೆಗೈದರು. ರಂಗ ತಜ್ಞ ಡಾ. ಭರತ್ ಕುಮಾರ್ ಪೊಲಿಪು ಅವರು ಡಾ. ಸುನೀತಾ ಶೆಟ್ಟಿ , ಮೋಹನ್ ನಾಗಮ್ಮನವರ, ದುರ್ಗಪ್ಪ ಕೋಟಿಯವರ್, ಶ್ರೀನಿವಾಸ ಜೋಕಟ್ಟೆ ಅವರನ್ನು ಪರಿಚಯಿಸಿದರೆ ಸಂಘದ ಗೌ. ಕೋಶಾಧಿಕಾರಿ ಎಂ. ಡಿ. ರಾವ್ ಹಾಗೂ ಓಂದಾಸ್ ಕಣ್ಣಂಗಾರ್, ಮೋಹನ್ ನಾಗಮ್ಮನವರ ಅವರು ಪುಸ್ತಕ ಗೌರವ ನೀಡಿದರು.
ಕಾರ್ಯಕ್ರಮದ ನಿರೂಪಣೆ ಡಾ. ಭರತ್ ಕುಮಾರ್ ಮಾಡಿ ಧನ್ಯವಾದರ್ಪಣೆಗೈದರು.