ಕನ್ನಡ ವಾರ್ತೆಗಳು

ಬಾಳಿಗ ಕೊಲೆಗೆ ಇಂದಿಗೆ ಒಂದು ತಿಂಗಳು : ಇನ್ನೂ ಪೊಲೀಸರಿಗೆ ಸಿಗದ ಪ್ರಮುಖ ಆರೋಪಿಗಳು

Pinterest LinkedIn Tumblr

ಬಾಳಿಗ ಹತ್ಯೆ ಪ್ರಕರಣ ; ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಎ.25ಕ್ಕೆ 

Baliga_murder_accused

ಮಂಗಳೂರು, ಎಪ್ರಿಲ್.21: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ. ಪಿ. ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಬೇಕಾಗಿರುವ ಶಂಕಿತ ಆರೋಪಿ ಯುವ ಬ್ರಿಗೇಡ್‌‌‌‌ನ ನರೇಶ್ ಶೆಣೈ ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಎ.25ಕ್ಕೆ ಮುಂದೂಡಲ್ಪಟ್ಟಿದೆ.

ಬಾಳಿಗ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈಯನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಪ್ರಕರಣದ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿ ರುವುದರಿಂದ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ನರೇಶ್ ಶೆಣೈ ಪರ ವಕೀಲರು ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಎಪ್ರಿಲ್ 20ರಂದು ನಡೆಯಬೇಕಿತ್ತು. ಆದರೆ ನಿನ್ನೆ ಅರ್ಜಿ ವಿಚಾರಣೆಗೆ ಬಂದಾಗ ಎರಡನೇ ಜೆ‌ಎಂ‍ಎಫ್‌ಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನರೇಶ್ ಶೆಣೈಗೆ ಜಾಮೀನು ನೀಡುವುದನ್ನು ವಿರೋಧಿಸಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಆಕ್ಷೇಪವನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಾ.21ರಂದು ಮುಂಜಾನೆ 5.30ರ ಸುಮಾರಿಗೆ ಪಿವಿಎಸ್ ಕಲಾಕುಂಜಾದ ಬಳಿಯ ತಮ್ಮ ನಿವಾಸದಿಂದ ದೇವಸ್ಥಾನಕ್ಕೆ ಹೊರಡುತ್ತಿದ್ದ ವೇಳೆ ಮನೆಯ ಸಮೀಪದಲ್ಲೇ ಬಾಳಿಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.ಇದೀಗ ವಿನಾಯಕ ಬಾಳಿಗ ಕೊಲೆ ನಡೆದು ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ.

ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿ ನರೇಶ್ ಶೆಣೈ ಜೊತೆ ಇವರ ಸ್ನೇಹಿತರಾದ ಶ್ರೀಕಾಂತ್ ಹಾಗೂ ವಿಘ್ನೇಶ್ ಕೂಡಾ ತಲೆ ಮರೆಸಿಕೊಂಡಿದ್ದಾರೆ. ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನರೇಶ್ ಶೆಣೈ ಹಾಗೂ ಶ್ರೀಕಾಂತ್ ವಿರುದ್ಧ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನಡುವೆ ಪೊಲೀಸರಿಗೆ ಸವಾಲಾಗಿರುವ ಈ ಪ್ರಕರಣದ ಉಳಿದ ಆರೋಪಿಗಳ ಶೋಧ ಮುಂದುವರಿದಿದೆ.

ಬಾಳಿಗ ಹತ್ಯೆಗೆ ಒಂದು ತಿಂಗಳು :

ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ನಡೆದು ಒಂದು ತಿಂಗಳು ಕಳೆದಿದೆ. ಆದರೆ, ಪೊಲೀಸ್ ತನಿಖೆಯಲ್ಲಿ ಗಣನೀಯ ಪ್ರಗತಿ ಕಂಡುಬಂದಿಲ್ಲ. ಮೂವರು ಸುಪಾರಿ ಕಿಲ್ಲರ್ಸ್ ಗಳನ್ನು ಪೊಲೀಸರು ಬಂಧಿಸಿದ್ದರೂ, ಸುಪಾರಿ ನೀಡಿದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಸುಪಾರಿ ನೀಡಿದ್ದಾರೆನ್ನಲಾದ ಶ್ರೀಕಾಂತ್ ಹಾಗೂ ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ನರೇಶ್ ಶೆಣೈ ಇನ್ನೂ ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ದೈನಂದಿನ ವಿದ್ಯಮಾನ ಪರಿಶೀಲಿಸಲಾಗುತ್ತಿದೆ. ಮಂಗಳೂರಿನ ಮೊದಲ ಹೈಪ್ರೊಫೈಲ್ ಆರ್ ಟಿ ಐ ಕಾರ್ಯಕರ್ತರ ಹತ್ಯೆ ಇದಾಗಿದ್ದು, ಈ ಪ್ರಕರಣದಲ್ಲಿ ಪ್ರಭಾವಿ ಉದ್ಯಮಿಗಳು ಹಾಗೂ ಉನ್ನತ ಮಟ್ಟದ ರಾಜಕಾರಣಿಗಳ ಕೈವಾಡ ಇರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ.

ಈ ಮಧ್ಯೆ ಜಿಲ್ಲಾಧಿಕಾರಿ ಇಬ್ರಾಹಿಂ ಮಧ್ಯಪ್ರವೇಶ ಮಾಡಿದ್ದು, ವಿನಾಯಕ ಬಾಳಿಗ ಸಲ್ಲಿಸಿದ ಎಲ್ಲ 92 ಆರ್ ಟಿ ಐ ಅರ್ಜಿಗಳ ಮಾಹಿತಿ ನೀಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಆರು ಸರ್ಕಾರಿ ಕಚೇರಿಗಳಿಗೆ 38 ಅರ್ಜಿ ಸಲ್ಲಿಸಿದ್ದು, ಇದರಲ್ಲಿ 13 ಮೂಡ, 11 ಮಂಗಳೂರು ಮಹಾನಗರ ಪಾಲಿಕೆಗೆ ಅರ್ಜಿ ಹಾಕಲಾಗಿದೆ. ಡಿಸಿ ಕಚೇರಿಗೆ ಒಂಭತ್ತು, ಮುಜರಾಯಿ ಕಚೇರಿಗೆ ನಾಲ್ಕು ಹಾಗೂ ಮಂಗಳೂರು ತಹಶೀಲ್ದಾರ್ ಕಚೇರಿಗೆ ಒಂದು ಅರ್ಜಿ ಸಲ್ಲಿಸಿದ್ದರು.

Write A Comment