ಬೆಂಗಳೂರು, ಏ. 25 : ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಪ್ರತಿ ಜಿಲ್ಲೆಯಲ್ಲೂ ಒಂದು ಕಾಲ್‌ಸೆಂಟರ್ ಆರಂಭಿಸಬೇಕು. ಜತೆಗೆ ಕೆರೆ ಹೂಳೆತ್ತಲು ವಿಶೇಷ ಹಣ ಒದಗಿಸುವಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಆಗ್ರಹಿಸಿದರು. ಬರಪೀಡಿತ ಜನರ ಸಮಸ್ಯೆಗಳನ್ನು ಆಲಿಸಿ ಕುಡಿಯುವ ನೀರು ಮತ್ತಿತರ ದೂರುಗಳಿಗೆ ಸ್ಪಂದಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ಕಾಲ್ ಸೆಂಟರ್ ಆರಂಭಿಸುವಂತೆ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹೂಳೆತ್ತಲು ಹಣ
ಬರ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಕೆರೆಗಳು ಬತ್ತಿ ಹೋಗಿರುವುದರಿಂದ ಸರ್ಕಾರ ಕೆರೆಗಳ ಹೂಳೆತ್ತಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಾಟಾಚಾರ ಅಧ್ಯಯನ
ರಾಜ್ಯಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳುವಲ್ಲಿ ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳ ಬರ ಅಧ್ಯಯನ ಕಾಟಾಚಾರದಿಂದ ಕೂಡಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಸಚಿವರಾಗಲಿ ಬರ ಅಧ್ಯಯನ ಸಂದರ್ಭದಲ್ಲಿ ಗಡಿಬಿಡಿಯಿಂದ ಸಭೆಗಳನ್ನು ನಡೆಸುತ್ತಿದ್ದಾರೆ. ಸಮಸ್ಯೆಗಳನ್ನು ಆಲಿಸುವ ವ್ಯವದಾನವನ್ನು ತೋರುತ್ತಿಲ್ಲ. ಸಮಯವೇ ಇಲ್ಲ ಎನ್ನುವ ವೇಳೆಗೆ ತರಾತುರಿಯಲ್ಲಿ ಈ ಬರ ಅಧ್ಯಯನ ನಡೆದಿದೆ. ಇದು ಕಾಟಾಚಾರಕ್ಕೆ ನಡೆದಿರುವ ಅಧ್ಯಯನ ಎಂದು ಅವರು ದೂರಿದರು.
ಬರದಿಂದ ಜನ ಗುಳೇ ಹೋಗುತ್ತಿರುವುದನ್ನು ತಪ್ಪಿಸಬೇಕಾದ ಸರ್ಕಾರ ಗುಳೆ ಹೋಗುವವರಿಗೆ ಬಸ್ ವ್ಯವಸ್ಥೆ, ಅವರ ಸಾಮಾನು ಸರಂಜಾಮುಗಳನ್ನು ಉಚಿತವಾಗಿ ಸಾಗಿಸಿ, ಟಿಕೆಟ್ ದರದಲ್ಲೂ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ. ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಸಾಕಷ್ಟು ಹಣ ನೀಡಿದರೂ ಅದನ್ನು ಸಮರ್ಪಕವಾಗಿ ಖರ್ಚು ಮಾಡುತ್ತಿಲ್ಲ. ರಾಜ್ಯದ ಖಜಾನೆಯಿಂದ ಬರ ಕಾಮಗಾರಿಗಳಿಗೆ ಹಣವನ್ನೇ ವಿನಿಯೋಗಿಸುತ್ತಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ವಿದ್ಯುತ್ ಪರಿಸ್ಥಿತಿಯ ಬಗ್ಗೆ ಹೇಳಲೂ ಸಾಧ್ಯವಿಲ್ಲ. ಆದರೂ ಇಂಧನ ಸಚಿವರು ಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.