ಕಾಸರಗೋಡು, ಏ.26: ಆಸ್ಪತ್ರೆ ಕಟ್ಟಡದಿಂದ ಹಾರಿ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಹೊಸದುರ್ಗ ಅಲಾಮಿ ಪಳ್ಳಿಯ ರಾಮದಾಸ್ ಪತ್ನಿ ಸಿಮಿ(31) ಎಂದು ಗುರುತಿಸಲಾಗಿದೆ. ಸಿಮಿಯನ್ನು ಹೆರಿಗೆಗಾಗಿ ಎ.20 ರಂದು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ರಕ್ತಸ್ರಾವ ಉಂಟಾದುದರಿಂದ ಮರುದಿನ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಬೆಳಿಗ್ಗೆ ಆಸ್ಪತ್ರೆಯ ಐದನೇ ಮಹಡಿಯಿಂದ ಹಾರಿದ್ದು, ಗಂಭೀರ ಗಾಯಗೊಂಡ ಸಿಮಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈಕೆ ಹೆರಿಗೆ ಬಳಿಕ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕಾಸರಗೋಡು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.