ಸುಳ್ಯ, ಮೇ 3: ಮಾರುತಿ ಓಮ್ನಿ ಕಾರು ಮತ್ತು ಕಂಟೈನರ್ ಲಾರಿ ಪರಸ್ಪರ ಢಿಕ್ಕಿ ಹೊಡೆದುಕೊಂಡ ಪರಿಣಾಮ ಓಮ್ನಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ಸಂಪಾಜೆ ಗ್ರಾಮದ ಗೂನಡ್ಕ ಬಳಿಯ ಬೀಜಕೊಚ್ಚಿ ಎಂಬಲ್ಲಿ ನಡೆದಿದೆ.
ಕಾರು ಚಾಲಕ ಯೂಸುಫ್(35) ಮತ್ತು ಮುಂಭಾಗದಲ್ಲಿ ಕುಳಿತಿದ್ದ ಮಕ್ಬೂಲ್ (60) ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓಮ್ನಿಯ ಹಿಂಬದಿ ಸೀಟಿನಲ್ಲಿದ್ದ ಸುಲೈಕಾ ಮತ್ತು ಸಲೀಂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು.
ಕೊಡಗಿನ ಕಡಂಗ ನಿವಾಸಿಗಳಾದ ಮಕ್ಬೂಲ್, ಅವರ ಪತ್ನಿ ಸುಲೈಕಾ, ಪುತ್ರ ಸಲೀಂ ಓಮ್ನಿಯಲ್ಲಿ ಮಂಗಳೂರಿಗೆ ಬರುತ್ತಿದ್ದರು. ಸಲೀಂಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಆತನ ಚಿಕಿತ್ಸೆಗಾಗಿ ಮಂಗಳೂರಿಗೆ ಹೊರಟಿದ್ದರು. ಯೂಸುಫ್ ಎಂಬವರು ಕಾರನ್ನು ಚಲಾಯಿಸುತ್ತಿದ್ದರು. ಓಮ್ನಿ ಸಂಪಾಜೆ, ಕಲ್ಲುಗುಂಡಿ ದಾಟಿ ಗೂನಡ್ಕ ಬಳಿ ಬರುತ್ತಿದ್ದಂತೆ ಬೀಜಕೊಚ್ಚಿ ಎಂಬಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು, ಓಮ್ನಿಯಲ್ಲಿ ಸಿಲುಕಿಕೊಂಡಿದ್ದ ಮಕ್ಬೂಲ್ ಮತ್ತು ಯೂಸುಫ್‌ರ ಮೃತದೇಹಗಳನ್ನು ಊರವರು ಹೊರತೆಗೆದು ಸುಳ್ಯ ಆಸ್ಪತ್ರೆಗೆ ಕಳುಹಿಸಿದ್ದು, ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಯಿತು. ಮಡಿಕೇರಿಯಿಂದ ಆಗಮಿಸಿದ ಮೃತರ ಸಂಬಂಧಿಕರು ಮೃತದೇಹಗಳನ್ನು ಕೊಂಡೊಯ್ದಿದ್ದಾರೆ.