ವರದಿ : ಈಶ್ವರ ಎಂ. ಐಲ್/ ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಜೋಗೇಶ್ವರಿ ಪೂರ್ವ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನದ ವಾರ್ಷಿಕ ಉತ್ಸವವು ಮೇ.1 ರಂದು ವೇದಮೂರ್ತಿ ಶಂಕರನಾರಾಯಣ ತಂತ್ರಿ ಡೊಂಬಿವಲಿ ಇವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ನರಹರಿ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಅಪರಾಹ್ನ ಪ್ರಾರ್ಥನೆ, ಸಂಕಲ್ಪ, ಶುದ್ದ, ಪುಣ್ಯಾಹ, ಎಲ್ಲಾ ಪರಿಹಾರ ದೇವರುಗಳಿಗೆ ಪಂಚಾಮೃತ, ನವಕ ಕಲಶ ಅಭಿಷೇಕ, ಪ್ರಸನ್ನ ಪೂಜೆ, ಮಹಾ ಪೂಜೆ ಬಳಿಕ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕ್ಷೇತ್ರದ ಸಮಿತಿಯ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರ ಜಿ. ಟಿ. ಆಚಾರ್ಯ,ಅವರು ಮಾತನಾಡುತ್ತಾ ಜೋಗೇಶ್ವರಿಯ ಈ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನವು ಪುರಾತನ ಕ್ಷೇತ್ರವಾಗಿದ್ದು ಅನೇಕರು ಇಲ್ಲಿ ಸೇವೆ ಮಾಡಿರುವರು ಎನ್ನುತ್ತಾ ಕ್ಷೇತ್ರದ ಸ್ಥಾಪಕರುಗಳನ್ನು, ಹಿರಿಯರನ್ನು ಹಾಗೂ ದಾನಿಗಳನ್ನು ನೆನಪಿಸಿಕೊಂಡರು. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಲಕ್ಕಿ ಡಿಫ್ ನ್ನು ಇಟ್ಟುಕೊಂಡಿದ್ದು ಇದಕ್ಕೆ ಸಹಕರಿಸಿದ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು ಇದು ಕೇವಲ ಧಾರ್ಮಿಕ ಕೇಂದ್ರವಾಗಿರದೆ ನಾವು ಈ ಕ್ಷೇತ್ರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುದರೊಂದಿಗೆ ಸಾಂಸ್ಕೃತಿಕ ಕೇಂದ್ರವನ್ನಾಗಿರಿಸಲೂ ಪ್ರಯತ್ನಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಸದಾನಂದ ಸಫಲಿಗ ಮಾತನಾಡುತ್ತಾ ಶ್ರೀ ಜಗದಂಬಾ ಕಾಳಭೈರವ ದೇವರ ಆಶೀರ್ವಾದದೊಂದಿಗೆ ನಾನು ಊರಿನ ಕಾರ್ಯಕ್ರಮವನ್ನು ರದ್ದುಗೊಳಿಸಿ ಬರಬೇಕಾಯಿತು. ಇನ್ನು ಮುಂದೆಯು ಕೂಡಾ ತನ್ನಿಂದಾಗುವ ಸೇವೆಯನ್ನು ಮುಂದಿವರಿಸುವೆನು ಎಂದರು. ದೇವಸ್ಥಾನದ ಟ್ರಸ್ಟಿ ಗೋವಿಂದ ಶೆಟ್ಟಿಯವರು ಮಾತನಾಡುತ್ತಾ ಎಲ್ಲಾ ಭಕ್ತರಿಗೆ ಹಾಗೂ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು. ಅಂತರಾಷ್ಟ್ರೀಯ ಕ್ರೀಡಾಪಟು ಸುಚರಿತಾ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸ್ಥಳೀಯ ಉದ್ಯಮಿ, ದಾನಿ ಆಶಿಶ್ ದುಬೆ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ನಂತರ ಮಹಾಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವರ ಉತ್ಸವ, ರಾತ್ರಿ ರಂಗ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಉಪಾಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯದರ್ಶಿ ಸಂಜೀವ ಪಿ. ಪೂಜಾರಿ, ಕೋಶಾಧಿಕಾರಿ ಶೇಖರ ಕರ್ಕೇರ, ಉಪಾಧ್ಯಕ್ಷರಾದ ಎಚ್. ಬಾಬು ಪೂಜಾರಿ, ಸತೀಶ್ ದೇವಾಡಿಗ, ಶೀನ ಪೂಜಾರಿ, ಸದಾಶಿವ ಕೋಟ್ಯಾನ್, ವಿಶ್ವಸ್ಥ ಮಂಡಳಿಯ ಸದಸ್ಯರು,ಸೇವಾ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಸಹಕರಿಸಿದರು.