ಮಂಗಳೂರು,ಮೇ.4: ವಿದೇಶಕ್ಕೆ ತೆರಳುತ್ತಿದ್ದ ಪ್ರಯಾಣಿಕನ ಲಗೇಜ್‌ನಲ್ಲಿ ಎರಡು ಸಜೀವ ಗುಂಡುಗಳು ಪತ್ತೆಯಾಗಿರುವ ಘಟನೆ ಸೋಮವಾರ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಪ್ರಯಾಣಿಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ವಾಮಂಜೂರು ನಿವಾಸಿ ಜಾನ್ ಜೋಸೆಫ್ ಫೆರ್ನಾಂಡಿಸ್ ಎಂಬವರು ಮುಂಬೈ ಮೂಲಕ ಇಸ್ರೇಲ್‌ಗೆ ತೆರಳಲು ಬಜ್ಪೆ ವಿಮಾನ ನಿಲ್ದಾಣದಿಂದ ಹೊರಟಿದ್ದ ಸಂದರ್ಭ ಈ ಘಟನೆ ನಡೆದಿದೆ. ಪರವಾನಿಗೆ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಸಾಗಿಸುವುದು ಅಪರಾಧವಾಗಿರುವ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಂದರ್ಭ ಸಜೀವ ಗುಂಡುಗಳು ಪತ್ತೆಯಾದ ಕಾರಣ ಆತನನ್ನು ಬಂಧಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾನ್ ಜೋಸೆಫ್ ಫೆರ್ನಾಂಡಿಸ್ ಅವರು ಕಳೆದ ಆರು ವರ್ಷಗಳಿಂದ ಆತ ಇಸ್ರೆಲ್‌ನಲ್ಲಿ ಹೌಸ್ ನರ್ಸ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದು, ‘‘ಮೇ 2ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಜೆಟ್ ಏರ್‌ವೇಸ್‌ಮೂಲಕ ಮುಂಬೈಗೆ ತೆರಳುತ್ತಿದ್ದಾಗ ಲಗೇಜ್‌ನಲ್ಲಿ ಸ್ಕ್ರೀನಿಂಗ್ ವೇಳೆ ಸಜೀವ ಗುಂಡುಗಳು ಪತ್ತೆಯಾಗಿತ್ತು.
ಎರಡು ವರ್ಷಗಳ ಹಿಂದೆ ಇಸ್ರೇಲ್‌ನಿಂದ ಕಾರ್ಗೊ ಮೂಲಕ ಮನೆ ಸಾಮಗ್ರಿಗಳಿಂದ ತುಂಬಿದ್ದ ಬ್ಯಾಗೊಂದನ್ನು ಕಳುಹಿಸಿದ್ದ. ಆಗಾಗ್ಗೆ ಊರಿಗೆ ಬರುತ್ತಿದ್ದ ಆತ ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದು, ಮತ್ತೆ ಇಸ್ರೇಲ್‌ಗೆ ತೆರಳುವ ಸಂದರ್ಭ ಕಾರ್ಗೊ ಮೂಲಕ ಬಂದಿದ್ದ ಹಳೆ ಬ್ಯಾಗ್‌ನೊಂದಿಗೆ ಮೇ 2ರಂದು ವಿಮಾನವೇರಲು ಸಿದ್ದತೆ ನಡೆಸಿದ್ದರು.
ಬ್ಯಾಗ್‌ನ ಕೈ ಬಳಿಯ ಪಾಕೆಟ್‌ನಲ್ಲಿದ್ದ ಸಜೀವ ಗುಂಡುಗಳ ಬಗ್ಗೆ ಅರಿವಿಲ್ಲದೆ ಜಾನ್ ಜೋಸೆಫ್ ಫೆರ್ನಾಂಡಿಸ್ ಪ್ರಯಾಣ ಆರಂಭಿಸಿದ್ದರು ಎಂದು ವಿಚಾರಣೆಯ ವೇಳೆ ಹೇಳಿಕೊಂಡಿರುವುದಾಗಿ ಹಾಗೂ ಪ್ರಕರಣದ ಕೂಲಂಕುಷ ತನಿಖೆ ನಡೆಯುತ್ತಿದೆ ಎಂದು ಪ್ರಕರಣದ ಬಗ್ಗೆ ವಿಚಾರಣೆ ಕೈಗೊಂಡಿರುವ ಬಜ್ಪೆ ಪೊಲೀಸರು ತಿಳಿಸಿದ್ದಾರೆ.