ಮುಂಬಯಿ: ವಾಷಿಂಗ್ ಮಷಿನ್ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ 19 ಬಂಗಾರದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಪ್ರಕರಣ ಮುಂಬೈನಲ್ಲಿ ನಡೆದಿದೆ.
ಭಾರತದ ಪಾಸ್‌ಪೋರ್ಟ್ ಹೊಂದಿದ್ದ ಮೊಹ್ಮದ್ ಅಸ್ಲಾಂಶೇಖ್ ಎಂಬ ವ್ಯಕ್ತಿ ರಿಯಾದ್ನಿಂದ ಮುಂಬೈಗೆ ಆಗಮಿಸಿದ್ದ. ಆ ವ್ಯಕ್ತಿಯ ಲಗೇಜ್ಗಳಲ್ಲಿದ್ದ ವಾಷಿಂಗ್ ಮಷಿನ್ನ ಎಂಜಿನ್ನಲ್ಲಿ 19 ಚಿನ್ನದ ಗಟ್ಟಿಗಳನ್ನು ಅಡಗಿಸಿಡಲಾಗಿತ್ತು. ಸ್ಕ್ರೀನಿಂಗ್ ವೇಳೆ ವಶಪಡಿಸಿಕೊಳ್ಳಲಾದ 19 ಗಟ್ಟಿಗಳ ಒಟ್ಟು ತೂಕ ಸುಮಾರು 3ಕೆಜಿ ಇದ್ದು, ಒಂದು ಕೋಟಿ ರೂ. ಮೌಲ್ಯದ್ದಾಗಿದೆ ಎಂದು ವಿಮಾನ ನಿಲ್ದಾಣ ಜಾಗೃತ ದಳದ (ಎಐಯು) ಅಧಿಕಾರಿಗಳು ತಿಳಿಸಿದ್ದಾರೆ.
ಮೊಹ್ಮದ್ ಶೇಕ್ನನ್ನು ತನಿಖೆಗೊಳಪಡಿಸಿದಾಗ ಮತ್ತೊಬ್ಬ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿದ್ದು, ಈ ಚಿನ್ನವನ್ನು ಆ ಮನುಷ್ಯನಿಗೆ ತಲುಪಿಸಬೇಕಾಗಿತ್ತು. ಶೇಕ್ ನೀಡಿದ ಮಾಹಿತಿ ಮೇರೆಗೆ ಸಲ್ಮಾನ್ಖಾನ್ ಎಂಬ ವ್ಯಕ್ತಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.