ಮಂಗಳೂರು, ಮೇ.04: ‘ಮನೆಯಲ್ಲಿ ಇರಬೇಡ ಎಲ್ಲಾದರೂ ಹೊರಟುಹೋಗು’ ಎಂದು ರಂಪಾಟ ಮಾಡಿದ ತಂದೆಯೊಬ್ಬ ತನ್ನದೇ ಮಗನಿಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಕಳವಳಕಾರಿ ಘಟನೆ ನಗರದ ಬಿಕರ್ನಕಟ್ಟೆ ಎಂಬಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಪೊಲೀಸ್ ದೂರು ದಾಖಲಾಗಿದೆ.
ಅಕ್ಷಯ್ ಶೆಟ್ಟಿ ಗಾಯಾಳುವಾಗಿದ್ದು, ಮುಖ, ಕೈಬೆರಳು ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ ೨ರಂದು ಅಕ್ಷಯ್ ತನ್ನ ಕೋಣೆಯಲ್ಲಿ ಟಿ.ವಿ. ನೋಡುತ್ತಿದ್ದ ಸಂದರ್ಭ ತಂದೆ ಗಣೇಶ್ ಶೆಟ್ಟಿ ಜಗಳ ಶುರುಮಾಡಿದ್ದು, ಅಕ್ಷಯ್‌ನನ್ನು ಮನೆ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಇದನ್ನು ಅಕ್ಷಯ್ ವಿರೋಧಿಸಿದ್ದು, ಈ ವೇಳೆ ಚೂರಿಯಿಂದ ಇರಿಯಲಾಗಿದೆ. ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.