ಉಡುಪಿ: ಕೋಟ ಪೊಲೀಸರು ಇತ್ತೀಚೆಗೆ ವಾಹನ ತಪಾಸಣೆ ವೇಳೆ ತೆಕ್ಕಟ್ಟೆ ಸಮೀಪ ಲಾರಿ ಚಾಲಕ ಶಿವರಾಜ್ ಗಾಣಿಗ ಮತ್ತು ಕ್ಲೀನರ್ ನಾಗರಾಜ್ ಗಾಣಿಗ ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದು ಪೊಲೀಸರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಪಕ್ಷದಲ್ಲಿ ಮೇ 15ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಗಾಣಿಗ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮೇ 5ರಂದು ರಾತ್ರಿ ಕುಂದಾಪುರ ಕಡೆಯಿಂದ ಬರುತ್ತಿದ್ದ ಲಾರಿಯನ್ನು ತೆಕ್ಕಟ್ಟೆಯಲ್ಲಿ ಕೋಟ ಠಾಣೆಯ ಪೊಲೀಸರು ತಡೆದು ನಿಲ್ಲಿಸಿ ದಾಖಲಾತಿ ತೋರಿಸುವ ವಿಚಾರದಲ್ಲಿ ಚಾಲಕ ಶಿವರಾಜ್ ಗಾಣಿಗ ಮತ್ತು ಕ್ಲೀನರ್ ನಾಗರಾಜ್ ಗಾಣಿಗ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದರು. ಅನಂತರ ಠಾಣೆಗೆ ಕರೆದುಕೊಂಡು ಹೋಗಿ ಠಾಣಾಧಿಕಾರಿ ಹಾಗೂ 8 ಮಂದಿ ಸಿಬಂದಿ ಶಿವರಾಜ್ ಮತ್ತು ನಾಗರಾಜ್ ಅವರ ಬಟ್ಟೆ ಬಿಚ್ಚಿ ಕೈಕಾಲುಗಳನ್ನು ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದರು. ಅಲ್ಲದೆ ಗನ್ ತಲೆಗೆ ಇಟ್ಟು ಮೇಲಾಧಿಕಾರಿಯವರಿಗೆ ತಿಳಿಸಿದರೆ ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದರು. ಶಿವರಾಜ್ ಮತ್ತು ನಾಗರಾಜ್ ಆಸ್ಪತ್ರೆಯಲ್ಲಿ ದಾಖ ಲಾಗಿದ್ದು ಪೊಲೀಸರ ವಿರುದ್ಧ ದೂರು ನೀಡಿದ್ದಾರೆ. ಆದರೆ ಪೊಲೀಸರ ವಿರುದ್ಧ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಎಸ್‌ಪಿ ಅಣ್ಣಾಮಲೈ ಅವರಿಗೂ ದೂರು ನೀಡಲಾಗಿದೆ. ಶೀಘ್ರ ಕಾನೂನು ಕ್ರಮ ಕೈಗೊಳ್ಳದಿದ್ದರು ವಿವಿಧ ಸಂಘಟನೆಗಳ ಜತೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಗಾಣಿ ಯುವಸಂಘಟನೆಯ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಾಲಕನ ಬಳಿ ಎಲ್ಲಾ ರೀತಿಯ ದಾಖಲೆಗಳಿದ್ದು ಅವುಗಳನ್ನು ತೋರಿಸಿದರೂ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಶಿವರಾಜ್ ಮತ್ತು ನಾಗರಾಜ್ ಅವರು ಸಹೋದರರಾಗಿದ್ದು ಅವರು ಹಲ್ಲೆ ಗೊಳಗಾಗಿ ಆಸ್ಪತ್ರೆಯಲ್ಲಿರುವುದರಿಂದ ಕುಟುಂಬ ಸಂಕಷ್ಟದಲ್ಲಿದೆ ಎಂದು ಅವರು ಹೇಳಿದರು. ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ ಗಾಣಿಗ, ಮುಂದಾಳುಗಳಾದ ಪ್ರಭಾಕರ ಗಾಣಿಗ, ರಾಘ ವೇಂದ್ರ ಗಾಣಿಗ ಉಪಸ್ಥಿತರಿದ್ದರು.