ಮಂಗಳೂರು, ಮೇ 14: ವಿನಾಯಕ್ ಬಾಳಿಗಾ ಹತ್ಯೆ ಪ್ರಕರಣದಲ್ಲಿ ದುಷ್ಟ ಶಕ್ತಿಗಳು ಕೈಜೋಡಿಸಿದೆ ಎಂದು ಆರೋಪಿಸಿರುವ ಜಿಎಸ್‌ಬಿ ರಕ್ಷಣಾ ವೇದಿಕೆ ಅ ದುಷ್ಟಶಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ವಿನಾಯಕ್ ಬಾಳಿಗಾರ ಸಹೋದರಿಯರಾದ ಉಷಾ ಮತ್ತು ಶ್ವೇತಾ ಪೈ ಆಗ್ರಹಿಸಿದ್ದಾರೆ.
ಶುಕ್ರವಾರ ವಿನಾಯಕ್ ಬಾಳಿಗಾರ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಬಿ ರಕ್ಷಣಾ ವೇದಿಕೆ ವತಿಯಿಂದ ಮೇ 9ರಂದು ನಡೆದ ಸಭೆಯಲ್ಲಿ ನಾವು ಭಾಗಿಯಾಗಿದ್ದು ಈ ಸಭೆಯಲ್ಲಿ ಕೇವಲ ವಿನಾಯಕ್ ಬಾಳಿಗಾ ಹತ್ಯೆಗೆ ನಮ್ಮ ಸಂತಾಪ ಎಂದು ಮಾತ್ರ ಹೇಳಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಯಾರೂ ಮನೆಗೆ ಬಂದು ಸಂತಾಪ ಸೂಚಿಸಿಲ್ಲ. ಆದರೆ ಸಭೆಯಲ್ಲಿ ಕಾಶೀಮಠಕ್ಕೆ ಮತ್ತು ಜಿಎಸ್‌ಬಿ ಸಮುದಾಯಕ್ಕೆ ಹೆಸರು ಕೆಡಿಸಲು ದುಷ್ಟಶಕ್ತಿಗಳು ಷಡ್ಯಂತ್ರ ರೂಪಿಸುತ್ತಿವೆ ಎಂದು ಆರೋಪಿಸಲಾಗಿತ್ತು. ನಾವು ಯಾರು ಕೂಡ ಜಿಎಸ್‌ಬಿ ಸಮುದಾಯ ಮತ್ತು ಕಾಶೀ ಮಠದ ಹೆಸರನ್ನು ಪ್ರಸ್ತಾಪಿಸಿಲ್ಲ. ಅವರು ಆರೋಪಿಸಿರುವ ದುಷ್ಟ ಶಕ್ತಿಗಳು ಯಾರು ಎಂದು ಅವರೇ ಬಹಿರಂಗಪಡಿಸಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅಖಿಲ ಭಾರತ ವಿಚಾರವಾದಿಗಳ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರು ಮಾತನಾಡಿ, ವಿನಾಯಕ್ ಬಾಳಿಗ ಜಿಎಸ್‌ಬಿ ಸಮುದಾಯದವರಾಗಿದ್ದರೂ ಅವರ ಹತ್ಯೆಯಾದ ಬಳಿಕ ಅವರ ಕುಟುಂಬಕ್ಕೆ ರಕ್ಷಣೆ ನೀಡಲು ಇದೀಗ ಕಾಶೀಮಠ ಸಂಸ್ಥಾನದ ಭಕ್ತರು ಸೇರಿ ರಚಿಸಿರುವ ಜಿಎಸ್‌ಬಿ ರಕ್ಷಣಾ ವೇದಿಕೆ ಮುಂದಾಗಲಿಲ್ಲ. ಆದರೆ ಕಾಶಿ ಮಠಕ್ಕೆ ಸಂಬಂಧಿಸಿದವರೊಬ್ಬರ ಹೆಸರು ಪತ್ರಿಗಳಲ್ಲಿ ಪ್ರಕಟವಾದ ತಕ್ಷಣ ಪೊಲೀಸ್ ಕಮಿಷನರ್‌ಗೆ ಮನವಿ ನೀಡಿ ಸಭೆ ನಡೆಸಿದ್ದಾರೆ ಯಾಕೆ ಎಂದು ಪ್ರಶ್ನಿಸಿದರು.
ಜಿಎಸ್‌ಬಿ ರಕ್ಷಣಾ ವೇದಿಕೆ ಹತ್ಯೆಗೊಳಗಾದ ವಿನಾಯಕ್ ಬಾಳಿಗಾ ಕುಟುಂಬಕ್ಕೆ ರಕ್ಷಣೆ ನೀಡಬೇಕಿತ್ತು. ಆದರೆ ಅವರಿಗೆ ರಕ್ಷಣೆ ನೀಡುತ್ತಿಲ್ಲ. ಬದಲಾಗಿ ಬಾಳಿಗಾ ಕುಟುಂಬಕ್ಕೆ ರಕ್ಷಣೆಗೆ ಬಂದವರನ್ನು ದುಷ್ಟಶಕ್ತಿಗಳು ಷಡ್ಯಂತ್ರ ನಡೆಸುತ್ತಿದೆ ಎಂದು ಟೀಕಿಸುತ್ತಿರ್ವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ವಿನಾಯಕ್ ಬಾಳಿಗಾರ ಹತ್ಯೆಯಾಗಿ 45 ದಿನಗಳು ಕಳೆದರೂ ಜಿಎಸ್‌ಬಿ ರಕ್ಷಣಾ ವೇದಿಕೆ ಧ್ವನಿಯೆತ್ತಿಲ್ಲ. ಸಮಾಜದ ವ್ಯಕ್ತಿಯೊಬ್ಬರು ಕೊಲೆಯಾಗಿದ್ದರೂ ಇವರಿಗೆ ವಿನಾಯಕ್ ಬಾಳಿಗಾರ ಕುಟುಂಬಕ್ಕೆ ರಕ್ಷಣೆ ಕೊಡಲು ಸಮಯಾವಕಾಶವಿರಲಿಲ್ಲ ಎಂದು ದೂರಿದರು.
ವಿನಾಯಕ್ ಬಾಳಿಗಾ ಹತ್ಯೆಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ. ಪ್ರಕರಣದ ಆರೋಪಿಗಳ ಬಂಧನವಾಗದಿದ್ದರೆ ದೊಡ್ಡ ರೀತಿಯಲ್ಲಿ ಹೋರಾಟ ಮಾಡಲಾಗುವುದು ಮತ್ತು ಬೆಂಗಳೂರಿನಲ್ಲಿಯೂ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ನರೇಂದ್ರ ನಾಯಕ್ ಹೇಳಿದರು.
ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜೂ.2ಕ್ಕೆ…
ಬಾಳಿಗ ಕುಟುಂಬದ ಪರ ವಕೀಲ ಕೆ.ಪಿ. ವಾಸುದೇವ ರಾವ್ ಮಾತನಾಡಿ, ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಯನ್ನು ಜೂ.2ಕ್ಕೆ ಮುಂದೂಡಿದ್ದಾರೆ ಎಂದು ಮಾಹಿತಿ ನೀಡಿದರು.
ವಿವಿಧ ಸಂಘಟನೆಗಳ ಮುಖಂಡರುಗಳಾದ ದೇವದಾಸ್, ಸಂತೋಷ್ ಬಜಾಲ್, ರಘು ಎಕ್ಕಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.