ಮಂಗಳೂರು, ಮೇ 17: ಪಶ್ಚಿಮ ಕರಾವಳಿಯು ಸುಂದರವಾಗಿರುವುದು ಮಾತ್ರವಲ್ಲ, ಸಂಪರ್ಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾದಲ್ಲಿ, ಅಭಿವೃದ್ಧಿಗೆ ವಿಫುಲ ಅವಕಾಶಗಳು ದೊರೆಯಲಿದೆ. ಈ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೈಲ್ವೆ ಇಲಾಖೆ ಸಿದ್ಧವಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) ಅಮೃತ ಮಹೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಗಳೂರನ್ನು ಒಳಗೊಂಡಂತೆ ದೇಶದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಜಂಟಿ ಪಾಲುದಾರಿಕೆಯ ಯೋಜನೆಗಳನ್ನು ರೂಪಿಸಲಾಗುವುದು. ರೈಲ್ವೆ ಇಲಾಖೆಯಲ್ಲಿ ಸುಧಾರಣೆಗೆ ಕಾರಣರಾದ ಜಾರ್ಜ್ ಫೆರ್ನಾಂಡಿಸ್‌ರ ಹೆಸರಿನಲ್ಲಿ ಸುರಂಗ ತಂತ್ರಜ್ಞಾನ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯ ಹೆಸರಿನಲ್ಲಿ ಉಡುಪಿಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇಂತಹ ಮಹತ್ವದ ಯೋಜನೆಗಳಲ್ಲಿ ಪಾಲುದಾರಿಕೆಗೆ ಕೆಸಿಸಿಐಗೂ ಅವಕಾಶವಿದೆ ಎಂದು ಹೇಳಿದರು.
ಕೊಂಕಣ ರೈಲ್ವೆಯ ಹಳಿಯನ್ನು ದ್ವಿಪಥಗೊಳಿಸುವ ಕಾರ್ಯ ಆರಂಭಗೊಂಡಿದೆ. ಕೊಂಕಣ ರೈಲ್ವೆಯಲ್ಲಿ ಸಾಂಪ್ರದಾಯಿಕ ಆಹಾರಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಉತ್ತೇಜನ ನೀಡುವ ಉದ್ದೇಶವೂ ಇದೆ. ರೈಲ್ವೆ ಸೇವೆಯು ಸಾಮಾಜಿಕ ಅಭಿವೃದ್ಧಿ ಹಾಗೂ ಬದಲಾವಣೆಗೂ ಕಾರಣವಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸುರೇಶ್ ಪ್ರಭು ಹೇಳಿದರು.
ರಾಷ್ಟ್ರದ ಬೆಳವಣಿಗೆಯಲ್ಲಿ ಸರಕಾರದ ಜತೆಗೆ ಸಂಘ ಸಂಸ್ಥೆಗಳು, ಕೈಗಾರಿಕೆಗಳ ಪಾತ್ರವೂ ಮಹತ್ತರವಾದುದು. ಹಿಂದೆ ಖಾಸಗಿ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಾಗಿಲ್ಲ. ಪ್ರಸಕ್ತ ಸರಕಾರ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಭಾರತವು ಇದೀಗ ಅತೀ ಹೆಚ್ಚು ಪ್ರಮಾಣದ ವಿದೇಶಿ ನೇರ ಹೂಡಿಕೆ ಆಕರ್ಷಿಸುತ್ತಿರುವ ರಾಷ್ಟ್ರವಾಗಿದೆ.ಮುಂದಿನ ಏಳು ವರ್ಷಗಳಲ್ಲಿ ಸಂಪತ್ತು ದ್ವಿಗುಣ ಗೊಳ್ಳಲಿದೆ. ಈ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಹೆಚ್ಚಿನಒತ್ತು ನೀಡುವುದು ಅತೀ ಅಗತ್ಯ ಎಂದವರು ಹೇಳಿದರು.
ಈ ಸಂದರ್ಭ ಕೆಸಿಸಿಐ ಬೆಳೆದು ಬಂದ 75 ವರ್ಷಗಳ ಹಾದಿಯ ಸ್ಮರಣ ಸಂಚಿಕೆಯನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಬಿಡುಗಡೆಗೊಳಿಸಿದರು. ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಂಸದ ನಳಿನ್ ಕುಮಾರ್ ಅತಿಥಿಗಳಾಗಿದ್ದರು.
ಕೆಸಿಸಿಐ ಅಧ್ಯಕ್ಷ ಮಾರೂರು ರಾಮಮೋಹನ ಪೈ, ಕಾರ್ಯದರ್ಶಿ ವತಿಕಾ ಪೈ, ಉಪಾಧ್ಯಕ್ಷ ಜೀವನ್ ಸಲ್ಡಾನಾ, ಮಾಜಿ ಅಧ್ಯಕ್ಷ ಜಾನ್ ಪ್ರಸಾದ್ ಮಿನೇಜಸ್, ಮುಹಮ್ಮದ್ ಅಮೀನ್ ಉಪಸ್ಥಿತರಿದ್ದರು.ಮಾಜಿ ಅಧ್ಯಕ್ಷ ಶ್ರೀನಿವಾಸ್ ಎಸ್. ಕಾಮತ್ ಪ್ರಸ್ತಾವನೆಗೈದರು. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.