ದುಬೈ, ಸೆ.22: ಕಲಾವಿದ, ಸಂಘಟಕರಾಗಿ ಖ್ಯಾತರಾಗಿದ್ದ ಉಮೇಶ್ ನಂತೂರುರವರ ಸ್ಮಾರಣಾರ್ಥ ದುಬೈಯ ಸಂಗಮ ಕಲಾವಿದರು ಹಾಗೂ ಫ್ಲಾಷ್‌ಬ್ಯಾಕ್ ಈವೆಂಟ್ಸ್ ‘ಪುಷ್ಪಾಂಜಲಿ’ ಸಂಗೀತ-ನೃತ್ಯ-ಹಾಸ್ಯಮಯ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಿದೆ.
ಅಕ್ಟೋಬರ್ 3ರಂದು ಸಂಜೆ 5.30ಕ್ಕೆ ದುಬೈಯ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ದುಬೈಯ ಸ್ಥಳೀಯ ಹೆಸರಾಂತರ ಕಲಾವಿದರಿಂದ ಮನಮೋಹಕ ನೃತ್ಯ, ಸುಮಧುರ ಸಂಗೀತ, ಮನಸಿಗೆ ಉಲ್ಲಾಸ ನೀಡುವ ಹಾಸ್ಯಮಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
ಪ್ರದರ್ಶನದ ಹಿನ್ನೆಲೆಯಲ್ಲಿ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ದುಬೈ ಕರಾಮದ ವಿನ್ನಿಸ್ ರೆಸ್ಟೋರೆಂಟ್‌ನಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸರ್ವೋತಮ ಶೆಟ್ಟಿ, ಜೋಸೆಫ್ ಮಥಾಯಿಸ್, ರಝಾಕ್ ದೀವಾ, ಮೊಹಮ್ಮದ್ ಯೂನುಸ್, ಅಮರ್ ನಂತೂರು, ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ನೋಯಲ್ ಮತ್ತಿತರರು ಹಾಜರಿದ್ದರು.
‘ಪುಷ್ಪಾಂಜಲಿ’ ಸಂಗೀತ-ನೃತ್ಯ-ಹಾಸ್ಯಮಯ ಮನೋರಂಜನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿನಿಮಾ-ರಂಗಭೂಮಿ ನಿರ್ದೇಶಕ, ಕಲಾವಿದ ವಿಜಯಕುಮಾರ್ ಕೋಡಿಯಾಲ್‌ಬೈಲ್ ಹಾಗೂ ಕಾರ್ಯಕ್ರಮ ನಿರೂಪಕರಾಗಿ ನವೀನ್ ಕುಮಾರ್ ಕೊಪ್ಪ ಆಗಮಿಸಲಿದ್ದಾರೆ.
ಮರೆಯಲಾಗದ ಉಮೇಶ್ ನಂತೂರು
ಸಂಘಟಕರಾಗಿ, ಕಲಾವಿದರಾಗಿ, ಕಾರ್ಯಕ್ರಮಗಳ ಯಶಸ್ಸಿನುದ್ದಕ್ಕೂ ಹಗಲಿರುಳು ಎನ್ನದೆ ದುಡಿಯುತ್ತಿದ್ದ ಉಮೇಶ್ ನಂತೂರು ನಮ್ಮನ್ನು ಅಗಲಿ ಇಂದಿಗೆ 10 ವರ್ಷವಾಗಿದೆ. ಆದರೆ ಅವರ ದೇಹ ದೂರವಾಗಿದ್ದರೂ ಅವರ ನೆನಪು ಇಂದಿಗೂ ದುಬೈಗರನ್ನು ಕಾಡುತ್ತಿದೆ.
ದುಬೈಗರಿಗೆ ಉಮೇಶ್ ನಂತೂರು ಚಿರಪರಿತ. ಕಲಾವಿದರನ್ನೆಲ್ಲ ಒಟ್ಟು ಸೇರಿಸಿಕೊಂಡು, ಅವರಿಗೆ ವೇದಿಕೆ ಕಲ್ಪಿಸಿ, ಅವರ ಕಲಾನೈಪುಣ್ಯತೆಯನ್ನು ಹೊರಗೆಡಹುವಲ್ಲಿ ನಂತೂರರ ಪಾತ್ರ ಹಿರಿದಾದದ್ದು. ಸಂಘಟಕ ಚಾತರ್ಯತೆಯನ್ನು ಮೈಗೂಡಿಸಿಕೊಂಡಿದ್ದ ಉಮೇಶ್ ನಂತೂರುರವರು, ಓರ್ವ ಅದ್ಭುತ ಕಲಾವಿದರು ಆಗಿದ್ದರು. ನಾಟಕಗಳಲ್ಲಿಯೂ ನಟಿಸುವ ಮೂಲಕ ತಾನೋರ್ವ ಬಹುಮುಖ ಪ್ರತಿಭೆ ಎನ್ನುವುದನ್ನು ಸಾಭೀತು ಪಡಿಸಿದ್ದರು.
ದುಬೈ ಕರ್ನಾಟಕ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದ ನಂತೂರು, ಸಂಗಮ ಕಲಾವಿದರು, ದುಬೈ ತಿಯಾ ಸಮಾಜದ ಸ್ಥಾಪಕರಾಗಿ, ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದರು. ರಜೆಯ ಅವಧಿಯಲ್ಲಿ ಮಂಗಳೂರಿಗೆ ಹೋಗಿದ್ದ ವೇಳೆ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿ 10 ವರ್ಷವಾಗಿದೆ. ಆದರೆ ಅವರ ಸಂಘಟನೆಯ ಚಾತುರ್ಯತೆ, ಕಲಾವಿದರಿಗೆ ನೀಡುತ್ತಿದ್ದ ಪ್ರೋತ್ಸಾಹ, ನಂಟು ಎಂದಿಗೂ ಮರೆಯಲಾಗದು.