ಭಾರತದಿಂದ ದುಬಾಯಿಗೆ ಆಗಮಿಸಿದ ಕರ್ನಾಟಕ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯಲ್ಲಿರುವ ರಾಮಕೃಷ್ಣ ತಪೋವನದ ಸ್ವಾಮಿಜಿ, ಸ್ವಾಮಿ ವಿವೇಕಾ ಚೈತನ್ಯಾನಂದ ರವರ ಪ್ರವಚನ ಕಾರ್ಯಕ್ರಮ ದುಬಾಯಿ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ 2014 ನವೆಂಬರ್ 21 ಶುಕ್ರವಾರ ಪೂರ್ವಾಹ್ನ 11 ಗಂಟೆಗೆ ಆಯೋಜಿಸಲಾಗಿತ್ತು.
ಪ್ರಾರಂಭದಲ್ಲಿ ವರಮಹಾಲಕ್ಷ್ಮೀ ಸಮಿತಿ ದುಬಾಯಿ ಸುಮಂಗಲೆಯರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜರಾಜೇಶ್ವರಿ ಭಜನಾ ತಂಡದವರು ಭಕ್ತಿ ಸಂಗೀತ ಸೇವೆ ನಡೆಸಿಕೊಟ್ಟರು. ಶ್ರೀ ರಾಜೇಶ್ ಕುತ್ತಾರ್ ಸರ್ವರನ್ನು ಸ್ವಾಗತಿಸಿದರು. ಜೀವನ್ ಶೆಟ್ಟಿಯವರು ಸರ್ವರನ್ನು ಸ್ವಾಗತಿಸುತ್ತಾ, ಸ್ವಾಮಿ ವಿವೇಕಾ ಚೈತನ್ಯಾನಂದ ರವರ ಪೂರ್ಣ ಪರಿಚಯ ಮತ್ತು ರಾಮಕೃಷ್ಣ ತಪೋವನದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು.
ಶ್ರೀ ರಮೇಶ್ ಶೆಟ್ಟಿಯವರು ಪುಷ್ಪ ಗುಛ್ಛ ನೀಡಿದರು, ಶ್ರೀಯುತರುಗಳಾದ ಸರ್ವೋತ್ತಮ ಶೆಟ್ಟಿ, ಗಣೇಶ್ ರೈ, ಸತೀಶ್ ಪೂಜಾರಿ, ಪ್ರಸನ್ನ ಶೆಟ್ಟಿಯವರು ಫಲ ನೀಡಿದರು.
ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮಿಜಿಯರವರಿಂದ ಪ್ರವಚನ
ದುಬಾಯಿಗೆ ಆಗಮಿಸಿ ತಮಗೆ ಪ್ರವಚನ ನೀಡಲು ಅವಕಾಶ ಕಲ್ಪಿಸಿ ಕೊಟ್ಟ ಭಕ್ತಾಭಿಮಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಜನಭೂಮಿಯಿಂದ ಕರ್ಮಭೂಮಿಯಾದ ಕೊಲ್ಲಿನಾಡಿನಲ್ಲಿ ಶಿಸ್ತಿನ ಜೀವನ, ತಮ್ಮ ದೈನಂದಿನ ಬದುಕಿನಲ್ಲಿ ಅವಿಶ್ರಾಂತ ದುಡಿಮೆಯ ಜೊತೆಗೆ ದಿನದಲ್ಲಿ ಕೆಲವು ಕ್ಷಣಗಳನ್ನು ಕಡ್ಡಾಯವಾಗಿ ಧ್ಯಾನ, ಯೋಗ, ಭಗವಂತನ ಚಿಂತನೆಯಲ್ಲಿ ತೊಡಗಿಸಿ ಕೊಂಡರೆ ದಣಿಯುವ ಮನಸ್ಸಿಗೆ ಸ್ವಲ್ಪವಾದರೂ ಉಲ್ಲಾಸ ದೊರೆಯುತ್ತದೆ ಎಂದು ತಿಳಿಸಿದರು. ಅರೋಗ್ಯವಂತ ಜೀವನ ನಡೆಸುವ ಬಗ್ಗೆ ಹಲವಾರು ಉದಾಹರಣೆ ಸಹಿತ ಕಿವಿಮಾತನ್ನು ಹೇಳಿದರು.
ಕಷ್ಟದಲ್ಲಿ, ನೋವಿನಲ್ಲಿರುವವರಿಗೆ, ಸಹಾಯ ಹಸ್ತ ನೀಡುವ ಗುಣವನ್ನು ಮೈಗೂಡಿಸಿಕೊಂಡು, ಮಕ್ಕಳಿಗೆ ಮಾನವೀಯ ಮೌಲ್ಯಗಳ ಬಗ್ಗೆ ತಿಳುವಳಿಕೆ ಮೂಡಿಸಿ ನಮ್ಮ ಸಂಸ್ಕಾರ, ಸಂಪ್ರದಾಯಗಳನ್ನು ತಿಳಿಸಿಕೊಡುವಂತೆ ಕರೆ ನೀಡಿದರು.
ಶ್ರೀ ಸರ್ವೋತ್ತಮ ಶೆಟ್ಟಿಯವರು ವಂದನೆಗಳನ್ನು ಸಮರ್ಪಿಸಿದರು. ಕೊನೆಯಲ್ಲಿ ಸ್ವಾಮಿಜಿಯವರು ಸರ್ವರಿಗೂ ಫಲ, ಪುಷ್ಪ ಪ್ರಸಾದವನ್ನು ನೀಡಿ ಆಶಿರ್ವದಿಸಿದರು. ಶ್ರೀಯುತರುಗಳಾದ ದಿನೇಶ್ ಶೆಟ್ಟಿ, ಜೀವನ್ ಶೆಟ್ಟಿ, ರಮೇಶ್ ಶೆಟ್ಟಿಯವರು ಕಾರ್ಯಕ್ರಮದ ಪೂರ್ಣ ಜವಬ್ಧಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು. ಮಧ್ಯಾಹ್ನದ ಮಹಾಪ್ರಸಾದ ಭೋಜನವನ್ನು ಸರ್ವರು ಸ್ವೀಕರಿಸಿದರು.
ರಾಮಕೃಷ್ಣ ತಪೋವನ ಪೊಳಲಿ – ಪಕ್ಷಿನೋಟ
ಕರ್ನಾಟಕ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೊಳಲಿಯ ರಾಜ ರಾಜೇಶ್ವರಿ ದೇವಾಸ್ಥಾನದ ಹತ್ತಿರ 2002 ರಲ್ಲಿ ರಾಮಕೃಷ್ಣ ತಪೋವನ ರಾಮಕೃಷ್ಣ ಆಶ್ರಮ ಮಾರ್ಗದರ್ಶನದಲ್ಲಿ ಸ್ವಾಮಿ ವಿವೇಕಾ ಚೈತನ್ಯಾನಂದರವರಿಂದ ಸ್ಥಾಪನೆಯಾಗಿದೆ. ಆಧ್ಯಾತ್ಮಿಕ ನೆಲೆಗಟ್ಟಿನ ಭದ್ರಬುನಾದಿಯಲ್ಲಿ ನಿಂತಿರುವ ಭಾರತೀಯ ಪರಂಪರೆ ಇಂದು ವೈಜ್ಞಾನಿಕ ನವ್ಯ ಯುಗದಲ್ಲಿ ಮುಂದಿನ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಬಾಲ್ಯದಿಂದಲೆ ಸಮರ್ಪಕವಾದ ಮೌಲ್ಯಾಧಾರಿತ ಶಿಕ್ಷಣ ನೀಡುವ ಕಾರ್ಯಯೋಜನೆಯ ಫಲವಾಗಿ ಗ್ರಾಮೀಣ ಭಾಗದಲ್ಲಿ ರಾಮಕೃಷ್ಣ ತಪೋವನ ಸೇವೆ ಸಲ್ಲಿಸುತ್ತಿದೆ.
ವಿವಿಧ ವಯೋಮಿತಿಯ ಬಾಲಕ ಬಾಲಿಕೆಯರು ವಿವಿಧ ಹಂತದಲ್ಲಿ ವಿದ್ಯಾಭ್ಯಾಸ, ಉಚಿತ ಊಟ, ವಸತಿ ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯುತಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿ ಸುಂದರ ಪರಿಸರದಲ್ಲಿ ಕಲಿಕೆಯಲ್ಲಿರುವ ಮಕ್ಕಳಿಗೆ ಎಲ್ಲಾ ಸೌಲಭ್ಯ ದೊರಕಿಸಿಕೊಡಲಾಗಿದೆ.
ಪ್ರತಿ ನಿತ್ಯ ಪ್ರಾರ್ಥನೆ, ಧ್ಯಾನ, ಭಜನೆ, ಅಧ್ಯಾತ್ಮಿಕ ಬಗ್ಗೆ ತಿಳಿದುಕೊಳ್ಳಲು ಗ್ರಂಥಾಲಯ, ಕಂಪ್ಯೂಟರ್ ತರಭೇತಿ, ಯೋಗ ತರಭೇತಿ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಭರತನಾಟ್ಯ, ಜನಪದ ನೃತ್ಯ, ಚಿತ್ರಕಲೆ, ಸಾಂಸ್ಕೃತಿಕ, ಆರೋಗ್ಯ, ಕ್ರೀಡೆ, ಸ್ವಚ್ಚತೆಯ ಬಗ್ಗೆ ಪೂರ್ಣ ತರಭೇತಿ ಪಡೆಯುತಿದ್ದಾರೆ. ಮಕ್ಕಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪುಸ್ತಕ, ಪ್ರತಿಭಾ ವೇತನ ದೊರೆಯುತ್ತಿದೆ. ಮಕ್ಕಳಿಗೆ ತರಭೇತಿ ನೀಡುವ ನುರಿತ ಅನುಭವಿ ಶಿಕ್ಷಕ ವರ್ಗವಿದೆ.
ದಿನ ನಿತ್ಯದ ಚಟುವಟಿಕೆಯೊಂದಿಗೆ ಹಬ್ಬ ಹರಿದಿನಗಳ ಆಚರಣೆ, ಕ್ರೀಡಾಕೂಟ, ಜಾನಪದ ಕಲೋತ್ಸವ, ಯಕ್ಷಗಾನ, ನಾಟಕ, ನೃತ್ಯ ಪ್ರದರ್ಶನ, ಧಾರ್ಮಿಕ ಆಚರಣೆಗಳು ನಡೆಯುತಿರುತ್ತದೆ.
ರಾಮಕೃಷ್ಣ ತಪೋವನ ಸಾಧನೆಯ ಹಿಂದಿರುವ ರುವಾರಿ: ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮಿಜಿ
ಆದ್ಯಾತ್ಮಿಕ ತಪಸ್ವಿ ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮಿಜಿಯವರು ಪೂರ್ವಾಶ್ರಮದಲ್ಲಿ ಚಾರ್ಟರ್ಡ್ ಅಕೌಂಟ್ ಪದವಿದರರು, ಬೆಂಗಳೂರಿನಲ್ಲಿ ಸ್ವಂತ ಸಂಸ್ಥೆಯನ್ನು ಹೊಂದಿದ್ದವರು, ಎಲ್.ಎಲ್.ಬಿ. ವಕೀಲ ಪದವಿ ಸಹ ಪಡೆದಿರುವವರು. ಆಧ್ಯಾತ್ಮಿಕದ ಕಡೆ ಒಲವು ಇದ್ದ ಇವರು ತಮ್ಮ ಮತೋಶ್ರಿಯವರ ಅನುಮತಿಯನ್ನು ಪಡೆದು, ಲೌಕಿಕ ಪ್ರಪಂಚದಿಂದ ಅಧ್ಯಾತ್ಮಿಕ ಜೀವನವನ್ನು ಆಯ್ಕೆಮಾಡಿಕೊಂಡರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಫಿಲಾಸಫಿ – ತತ್ವಶಾಸ್ತ್ರ ಸ್ನಾತಕೋತರ ಪದವಿ, ಫಿಲಾಸಫಿಯಲ್ಲಿ – “ಶ್ರೀ ರಾಮಕೃಷ್ಣ – ದಿ ಮೋಡ್ರನ್ ಪ್ರೋಫೆಟ್ ಅಫ್ ಯೂನಿವರ್ಸಲ್ ರಿಲಿಜಿಯನ್” ಸಂಶೋಧನೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಶ್ರೀ ರಾಮಕೃಷ್ಣ ಪರಮಹಂಸ, ಮಾತೆ ಶಾರದದೇವಿ, ಸ್ವಾಮಿ ವಿವೇಕಾನಂದರ ತತ್ವಗಳಿಂದ ಪ್ರಭಾವಿತರಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ತಮ್ಮ ಗುರು, ಗುರುದೇವ ರಿಂದ ದೊರೆತ ಸೂಚನೆ, ನಿರ್ದೇಶನದ ಮೇರೆಗೆ ತಮ್ಮ ವಾಣಿಜ್ಯ ವ್ಯವಹಾರವನ್ನು ಪೂರ್ಣವಾಗಿ ತ್ಯಜಿಸಿ ಇಂದು ವನಸಿರಿಯ ನಡುವಿನಲ್ಲಿ ತಲೆ ಎತ್ತಿ ನಿಂತಿರುವ ರಾಮಕೃಷ್ಣ ತಪೋವನ ಆಶ್ರಮದ ಸ್ಥಾಪಕರಾಗಿ, ವಿಶ್ವಕ್ಕೆ ಜ್ಞಾನದ ಬೇಳಕನ್ನು ನೀಡುತಿದ್ದಾರೆ.
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ
ರಾಮಕೃಷ್ಣ ತಪೋವನದ ಬಗ್ಗೆ ಹೆಚ್ಚಿನ ಮಾಹಿತಿ ವೆಬ್ ಸೈಟ್ ನಲ್ಲಿ ಲಭ್ಯವಿದೆ.
Website : www.ramakrishnatapovan.org