ಫೋಟೋ: ಅಶೋಕ್ ಬೆಳ್ಮಣ್
ದುಬೈ, ನ.23: ಡಿಸೆಂಬರ್ 12ರಂದು ದುಬೈ ಕರಾಮದ ಅಲ್‌ನಸ್ರ್ ಲಿಸೆರ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಗಲ್ಪ್‌ಮಟ್ಟದ ‘ಬಲೆ ತೆಲಿಪಾಲೆ’ ಹಾಸ್ಯ ಪ್ರದರ್ಶನದ ಪೂರ್ವಭಾವಿಯಾಗಿ ಶನಿವಾರದಂದು ದುಬೈಯ ಕಿಸೆಸ್‌ನಲ್ಲಿರುವ ಫೋರ್ಚುನ್ ಪ್ಲಾಝಾ ಹೊಟೇಲ್‌ನಲ್ಲಿ ಪತ್ರಿಕಾ ಪ್ರಕಟಣೆ ಹಾಗೂ ಟಿಕೆಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕರಾವಳಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ನಮ್ಮ ಟಿವಿ ಆಯೋಜಿಸಿದ್ದ ತುಳು ಹಾಸ್ಯ ಪ್ರದರ್ಶನವನ್ನು ಅದ್ದೂರಿಯ ಯಶಸ್ಸು ಕಂಡ ಬಳಿಕ, ಗಲ್ಪ್‌ರಾಷ್ಟ್ರಗಳ ಕಲಾವಿದರ ಕೋರಿಕೆಯ ಮೇರೆಗೆ ಇದೀಗ ದುಬೈಯಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ದುಬೈ ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಮಾಲಕ ಹರೀಶ್ ಶೇರಿಗಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಮ್ಮ ಟಿವಿಯ ಶಿವಶರಣ್ ಶೆಟ್ಟಿ, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠ್ಠಲ ಶೆಟ್ಟಿ, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಪ್ರವೀಣ್ ಶೆಟ್ಟಿ, ತುಳುಕೂಟ ಯುಎಇ ಕೃಷ್ಣರಾಜ ತಂತ್ರಿ, ನಮ್ಮ ತುಳುವೆರ್‌ನ ಸುಧಾಕರ ಆಳ್ವ, ರೇಡಿಯೋ ಸ್ಪೈಸ್‌ನ ಹರ್ಮನ್ ಲೂಯಿಸ್, ಲೀಲಾಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರದರ್ಶನದ ಮೀಡಿಯಾ ಪ್ರಮೋವನ್ನು ಹೀಟ್ ಶೀಲ್ಡ್‌ನ ಪ್ರೇಮನಾಥ್ ಶೆಟ್ಟಿ ಬಿಡುಗಡೆಗೊಳಿಸಿದರೆ, ಜಾಹೀರಾತು ಕೈಪಿಡಿ(ಬ್ರೋಚರ್)ಯನ್ನು ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಮಾರ್ಕ್ ಡೆನ್ನಿಸ್ ಅನಾವರಣಗೊಳಿಸಿದರು. ಮೊದಲ ಟಿಕೆಟ್‌ನ್ನು ಹರೀಶ್ ಶೇರಿಗಾರ್ ಅವರು ದಿವೇಶ್ ಆಳ್ವರಿಗೆ ನೀಡಿದರು.
ಪ್ರದರ್ಶನವು ಡಿ.12ರಂದು ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ. ವಿಜಯಿ ತಂಡಗಳಿಗೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಲ್ಪ್ ಮಟ್ಟದ ಒಟ್ಟು 12 ತಂಡಗಳು (ಯುಎಇ, ಕುವೈಟ್, ಬಹರೈನ್, ಒಮಾನ್)ಭಾಗವಹಿಸಲಿರುವ ಈ ಪ್ರದರ್ಶನದಲ್ಲಿ ವಿಜಯನಾಥ ವಿಠ್ಠಲ ಶೆಟ್ಟಿ ಹಾಗೂ ಶಿವಶರಣ್ ಶೆಟ್ಟಿ ತೀರ್ಪುಗಾರರಾಗಿರುತ್ತಾರೆ. ವಿಜಯಿ ತಂಡವನ್ನು ಎಸ್‌ಎಂಎಸ್ ಮೂಲಕ ಪ್ರೇಕ್ಷಕರು ಆಯ್ಕೆ ಮಾಡಲಿದ್ದಾರೆ.
ಗಲ್ಫ್ ಮಟ್ಟದ ಕಲಾವಿದರ ನೈಪುಣ್ಯತೆ, ಹಾಸ್ಯದ ಸೊಬಗನ್ನು ಇಲ್ಲಿನ ತುಳುವರು ಪ್ರದರ್ಶನದಲ್ಲಿ ಸವಿಯಬಹುದಾಗಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ನಡೆದಿರುವ ‘ಬಲೆ ತೆಲಿಪಾಲೆ’ ಹಾಸ್ಯ ಪ್ರದರ್ಶನವು ಯೂಟೂಬ್‌ನಲ್ಲಿ ದಾಖಲೆಯನ್ನೇ ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಯಶಸ್ಸು ಕಂಡಿರುವ ಪ್ರದರ್ಶನಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.
ಪ್ರದರ್ಶನದ ವಿಜಯಿ ತಂಡವು ಮೊದಲನೆ ಬಹುಮಾನವಾಗಿ 6,666 ದಿರ್ಹಂ, ದ್ವಿತೀಯ ತಂಡವು 3,333ದಿರ್ಹಂ ಹಾಗೂ ತೃತೀಯ ತಂಡವು 2,222ದಿರ್ಹಂ ನಗದು ಪುರಸ್ಕಾರ ಪಡೆಯಲಿದೆ. ಜೊತೆಗೆ ಈ ಬಾರಿ ಮಹಿಳಾ ತಂಡ ಕೂಡ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ತಂದುಕೊಟ್ಟಿದೆ.
‘ಬಲೆ ತೆಲಿಪಾಲೆ’ ಪ್ರದರ್ಶನದೊಂದಿಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ರಿಂದ ಸಂಗೀತ ರಸಮಂಜರಿ ಹಾಗೂ ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಖ್ಯಾತಿಯ ಕಿಶೋರ್ ಅಮನ್‌ರಿಂದ ಡ್ಯಾನ್ಸ್ ಪ್ರದರ್ಶನಗೊಳ್ಳಲಿದೆ. ಜೊತೆಗೆ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು ತಂಡದವರಿಂದ ಹಾಸ್ಯ ಪ್ರದರ್ಶನ ಕೂಡಾ ನಡೆಯಲಿದೆ.
ಕಾರ್ಯಕ್ರಮದ ಆರಂಭದಲ್ಲಿ ನಮ್ಮ ಟಿವಿ ದುಬೈಯ ಪ್ರತಿನಿಧಿ ವಿನಯ್ ನಾಯಕ್ ಎಲ್ಲರನ್ನು ಸ್ವಾಗತಿಸಿದರು. ಶಿವಶರಣ್ ಶೆಟ್ಟಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಯುಎಇಯ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಭಾಗವಹಿಸಿದ್ದರು.