Photo: Ashok Belman
ಶಾರ್ಜಾ ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಹಾರಕೂಟ ಮತ್ತು ಕರ್ನಾಟಕ ರಾಜ್ಯೋತ್ಸವ ಸಮಾರಂಭ ದುಬಾಯಿ ಜಬೀಲ್ ಉದ್ಯಾನವನದಲ್ಲಿ 2014 ನವೆಂಬರ್ 28ನೇ ತಾರೀಕು ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30 ರವರೆಗೆ ನಡೆಯಿತು.
ಸುಡುಬೇಸಿಗೆ ಮರೆಯಾಗಿ ದುಬಾಯಿ ತಂಪಾದ ಹವಾನಿಯಂತ್ರಿತ ನಗರದ ಹೃದಯಭಾಗದ ಜಬೀಲ್ ಉಧ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನು ತನ್ನೆಡೆಗೆ ಕೈಬೀಸಿ ಕರೆಯಿತ್ತಿದೆ. ಕರ್ನಾಟಕ ಸಂಘ ಶಾರ್ಜಾ ತನ್ನ ವಾರ್ಷಿಕ ವಿಹಾರ ಕೂಟ, ಕರ್ನಾಟಕ ರಾಜ್ಯೋತ್ಸವ , ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವನಸಿರಿಯ ಮಡಿಲಲ್ಲಿ ಆಯೋಜಿಸಲಾಗಿದ್ದು ಅಹ್ವಾನಿತ ಕೊಲ್ಲಿನಾಡಿನ ಕನ್ನಡಿಗರು ತಮ್ಮ ಮಕ್ಕಳು, ಸ್ನೇಹಿತರೊಂದಿಗೆ ಯು.ಎ.ಇ. ಯ ವಿವಿಧ ಭಾಗದಿಂದ ಉತ್ಸಾಹದಿಂದ ನಕ್ಕು ನಲಿಯುತ್ತಾ ಆಗಮಿಸಿದರು. ಕರ್ನಾಟಕ ಸಂಘ ಶಾರ್ಜಾದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಎಲ್ಲಾ ಅಹ್ವಾನಿತ ಕನ್ನಡಿಗರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.
ಯು.ಎ.ಇ. ರಾಷ್ಟ್ರೀಯ ದಿನ ಮುಂಚಿತವಾಗಿ ಆಚರಿಸಿದ ಕನ್ನಡಿಗರು
ಡಿಸೆಂಬರ್ 2ನೇ ತಾರೀಕು ಅರಬ್ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ದಿನಾಚರಣೆಯನ್ನು ಶಾರ್ಜಾ ಕರ್ನಾಟಕ ಸಂಘ ನಾಲ್ಕು ದಿನ ಮುಂಚಿತವಾಗಿ ಕನ್ನಡಿಗರಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಯು.ಎ.ಇ. ರಾಷ್ಟ್ರ ಧ್ವಜ , ಕರ್ನಾಟಕ ರಾಜ್ಯ ಧ್ವಜ ಅರಳಿಸಿ, ವಿಹಾರ ಕೂಟ, ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆಗೆ ಚಾಲನೆ ನೀಡಲಾಯಿತು. ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಶರಾದ ಶ್ರೀ ಶಾಂತರಾಂ ಆಚಾರ್ ಸರ್ವರನ್ನು ಸ್ವಾಗತಿಸಿದರು. ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್ ರವರು ಶುಭಾಶಯಗಳನ್ನು ಸಲ್ಲಿಸಿದರು.
ವಿಶೇಷ ಅತಿಥಿ ಶ್ರೀ ಸಿ. ಬಿ, ಚೌದರಿಯವರು ನಡೆಸಿಕೊಟ್ಟ ನಗುವಿನ ಕಾರ್ಯಗಾರ
ವಿಶೇಷ ಅತಿಥಿಯಾಗಿ ಆಗಮಿಸಿದ ಶ್ರೀ ಸಿ. ಬಿ. ಚೌದರಿ ರವರು ಮೂವತ್ತು ನಿಮಿಷಗಳ ಕಾಲ ವಿವಿಧ ನಗೆಗಳ ಮೂಲಕ ನಗುವಿನ ಕಾರ್ಯಗಾರ ಆಯೋಜಿಸಿ ಚಿಲುಮೆಯನ್ನು ಚಿಮ್ಮಿಸಿದರು. ದೈನಂದಿನ ಯಾಂತ್ರಿಕ ಬದುಕಿನ ನಡುವೆ ನಗಲು ಸಮಯ ಇಲ್ಲದಿರುವ ಕೊಲ್ಲಿ ನಾಡಿನ ಕನ್ನಡಿಗರಿಗೆ ನಗುವಿನ ಮಹತ್ವ ಮತ್ತು ಅರೋಗ್ಯದ ಬಗ್ಗೆ ಪೂರ್ಣ ಮಾಹಿತಿ ನೀಡಿ ವಿವಿಧ ರೀತಿಯಲ್ಲಿ ನಗಿಸುವುದರ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು. ನಗೆ ಕಾರ್ಯಗಾರದಲ್ಲಿ ಮಂಗ್ಲೂರ್ ಕೊಂಕಣ್ಸ್ ಅಧ್ಯಕ್ಷರಾದ ಶ್ರೀ ಜೇಮ್ಸ್ ಮೆಂಡೋನ್ಸಾ, ಕನ್ನಡಿಗರು ದುಬೈ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಶ್ರೀ ಸದನ್ ದಾಸ್, ಚಿಲಿವಿಲಿಯ ಸತೀಶ್ ವೆಂಕಟರಮಣ, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ನ ಪ್ರವೀಣ್ ಶೆಟ್ಟಿ ಹಾಗೂ ವಿಹಾರ ಕೂಟದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರು, ಮಕ್ಕಳು, ಪುರುಷರು ಅತ್ಯಂತ ಸಂತೋಷದಿಂದ ಪಾಲ್ಗೊಂಡರು.ಶಾರ್ಜಾ ಕರ್ನಾಟಕ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಸಂಭ್ರಮಿಸಿದ ಮಕ್ಕಳು
ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ವಯೋಮಿತಿಯ ಮಕ್ಕಳು ಬಣ್ಣದ ಲೋಕವನ್ನು ಬೀಲಿಯ ಹಾಳೆಯ ಮೇಲೆ ಸೃಷ್ಠಿಸಿದ್ದರು. ವಿವಿಧ ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತಿಯ ಬಹುಮಾನಗಳನ್ನು ಆಯ್ಕೆಯಾದ ಮಕ್ಕಳು ತಮ್ಮದಾಗಿಸಿಕೊಂಡರು.
ಕವಯಿತ್ರಿ ಆರತಿ ಘಟಿಕಾರ್ ಕವನ ಸಂಕಲನ “ಹನಿ ಹನಿ ಚಿತ್ತಾರ” ಬಿಡುಗಡೆ
ದುಬಾಯಿಯಲ್ಲಿ ನೆಲೆಸಿರುವ ಕವಯತ್ರಿ ಶ್ರೀಮತಿ ಆರತಿ ಘಟಿಕಾರ್ ರವರು ರಚಿಸಿ ಕನ್ನಡ ಕವನ ಸಂಕಲನ “ಹನಿ ಹನಿ ಚಿತ್ತಾರ” ಪುಸ್ತಕವನ್ನು ವಿಹಾರಕೂಟದಲ್ಲಿ ಸಮಾವೇಶಗೊಂಡ ಕನ್ನಡಿಗರ ಸಮ್ಮುಖದಲ್ಲಿ ಕರ್ನಾಟಕ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್ ರವರು ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ವನ ಸಿರಿಯ ಮಧ್ಯದಲ್ಲಿ ಕನ್ನಡ ಪುಸ್ತಕ ಬಿಡುಗಡೆ ಮಾಡಿದ ಶಾರ್ಜಾ ಕರ್ನಾಟಕ ಸಂಘದ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಕವಯಿತ್ರಿ ಆರತಿ ಘಟಿಕಾರ್ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ವಿಹಾರ ಕೂಟದಲ್ಲಿ ನಾಲ್ಕು ತಂಡಗಳ ವೈವಿಧ್ಯಮಯ ಸ್ಪರ್ಧೆಗಳ ಪ್ರಬಲ ಪೈಪೋಟಿ
ವಿಹಾರಕೂಟದಲ್ಲಿ ಆಗಮಿಸಿದ ಎಲ್ಲಾ ಕನ್ನಡಿಗರು ಕರ್ನಾಟಕದ ಇತಿಹಾಸದ ರಾಜವಂಶಗಳಾದ ಕದಂಬ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಹೆಸರಿನ ತಂಡಗಳಾಗಿ ಹಲವಾರು ಆಕರ್ಷಕ ಸ್ಪರ್ಧೆಗಳಲ್ಲಿ ಬಾರಿ ಪೈಪೋಟಿ ನಡೆಸಿ ಹೊಯ್ಸಳ ಅತ್ಯಂತ ಹೆಚ್ಚು ಅಂಕ ಗಳಿಸಿ ವಿಜಯಿಶಾಲಿಗಳಾದರು. ದ್ವಿತೀಯ ಸ್ಥಾನದಲ್ಲಿ ಚಾಲುಕ್ಯ, ರಾಷ್ಟ್ರಕೂಟ ತಮ್ಮದಾಗಿಸಿಕೊಂಡರು.ಕೊನೆಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಮಧ್ಯಾಹ್ನದ ರುಚಿಯಾದ ಭೋಜನ ವ್ಯವಸ್ಥೆ ದುಬಾಯಿಯ ದಾಸ್ ಪ್ರಕಾಶ್ ರೆಸ್ಟೊರೆಂಟ್ ನಿಂದ ಏರ್ಪಡಿಸಲಾಗಿದ್ದು ಶ್ರೀ ಸತೀಶ್ ಪೂಜಾರಿಯವರು ಜವಬ್ಧಾರಿಯನ್ನು ವಹಿಸಿಕೊಂಡಿದ್ದರು. ಮಹಿಳಾ ವಿಭಾಗದ ಸದಸ್ಯರು, ವಿಶ್ವನಾಥ್ ಶೆಟ್ಟಿ, ರಾಜೇಶ್ ಕುತ್ತಾರ್ ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಪೂರ್ಣ ಜವಬ್ಧಾರಿಯನ್ನು ವಹಿಸಿಕೊಂಡು ವಿಹಾರ ಕೂಟವನ್ನು ಯಶಸ್ವಿಗೊಳಿಸಿದರು.
ಗಣೇಶ್ ರೈ – ಯು.ಎ.ಇ.