ದುಬೈ, ಜ.27: ಜನವರಿ 30ರಂದು ಅಜ್ಮಾನ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಯುಎಇ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಆಯೋಜಿಸಿರುವ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ ಕ್ರೀಡಾಕೂಟಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಜನವರಿ 30ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಲಿವೆ. ಜೊತೆಗೆ ಸಣ್ಣಪುಟ್ಟ ಮಕ್ಕಳಿಗೂ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್‌ರವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಕ್ರೀಡಾಸಚಿವರಾದ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಜಿಎಂಸಿ ಮೆಡಿಕಲ್ ಕಾಲೇಜಿನ ಸಂಚಾಲಕ ತುಂಬೆ ಮೊಯಿದಿನ್, ಮಂಗಳೂರು ಉತ್ತರ ಶಾಸಕರಾದ ಮೊಯಿದಿನ್ ಬಾವಾ, ಅಲ್ ಬದ್ರಿಯಾ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್‌ನ ಬಿ.ಎ.ಮುಮ್ತಾಝ್ ಅಲಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಬಿಸಿಎಫ್ ಸ್ಪೋರ್ಟ್ಸ್ ಕಮಿಟಿಯ ಸಂಚಾಲಕ ಹನೀಫ್ ಕಾಪು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಎಇಯಲ್ಜ್‌ರುವ ಕನ್ನಡಿಗ ಬ್ಯಾರಿ ಬಾಂಧವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇರುವ ಈ ಕ್ರೀಡಾಕೂಟದಲ್ಲಿ ಮಹಿಳೆಯರಿಗೆ, ಮಹನೀಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧಾತ್ಮಕ ಕ್ರೀಡಾಚಟುವಟಿಕೆಗಳು, ಕ್ರಿಕೆಟ್, ರೇಸ್, ರಿಲೇ, ಕಬಡ್ಡಿ, ಕೊಕ್ಕೋ, ತ್ರೋಬಾಲ್, ಫುಟ್ಬಾಲ್, ಡಿಸ್ಕ್ ಥ್ರೋ, ಹಗ್ಗ-ಜಗ್ಗಾಟ, ಮಹಿಳೆಯರಿಗೆ-ಮಕ್ಕಳಿಗಾಗಿ ವಿಶೇಷವಾದ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.
ಪ್ರಮುಖ ಆಕರ್ಷಣೆಯಾಗಿ ಸ್ಪರ್ಧಾಳುಗಳ ಆಕರ್ಷಕ ಪಥ ಸಂಚಲನ, ಕೆಲವು ವಿಶೇಷವಾದ ತುಳುನಾಡಿನ ಗ್ರಾಮೀಣ ಸ್ಪರ್ಧೆಗಳು ಹಾಗೂ ಮಹಿಳೆಯರಿಗೆ ಪಾಕ ಸ್ಪರ್ಧೆ ಮೊದಲಾದ ವೈವಿದ್ಯತೆಯಿಂದ ಕೂಡಿದ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ಪ್ರವೇಶ ಉಚಿತವಾಗಿದ್ದು, ಈ ಕ್ರೀಡಾಕೂಟದಲ್ಲಿ ಹಲವಾರು ಆಕರ್ಷಕ ರಾಫಲ್ ಡ್ರಾ ಬಹುಮಾನಗಳು ಮತ್ತು ಕೆಲವು ವಿಶೇಷ ಕ್ರೀಡೆಗಳಲ್ಲಿ ಗೆದ್ದವರಿಗೆ ವಿಶೇಷ ಗಿಫ್ಟ್‌ಗಳನ್ನೂ ನೀಡಲಾಗುವುದು. ಪಾಕ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಪಾಕದ ಹೆಸರು, ರೇಸಿಪಿಯ ವಿವರ ಮತ್ತು ತಮ್ಮ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು ಹಾಗೂ ಬೆಳಗ್ಗೆ 10.30ರೊಳಗೆ ತರಬೇಕೆಂದು ಸೂಚನೆ ನೀಡಲಾಗಿದೆ.