(ಕುವೈಟ್) : ಮೂರು ವರ್ಷದ ಹೆಣ್ಣು ಮಗುವನ್ನು ಪ್ಲೇ ಸ್ಕೂಲ್ ನಿಂದ ಕರೆತರುವ ಸಮಯ. ಚಾಲಕ ಮಗುವನ್ನು ಕಾರಿನಲ್ಲೇ ಮರೆತು ಹೋದ. ಕೆಲವೇ ಘಂಟೆಗಳಲ್ಲಿ ಸೆಕೆಯನ್ನು ತಾಳಲಾರದೇ ಮಗುವು ಆಸು ನೀಗಿತ ಹೃದಯ ವಿದ್ರಾವಕ ಘಟನೆ (ಆಗಸ್ಟ್ 4) ರಂದು ಕುವೈಟ್ ನ ಅಬೂಹಲೀಫ ಎಂಬಲ್ಲಿ ನಡೆದಿದೆ.
ಘಟನೆಯ ವಿವರ: ಮಹಾರಾಷ್ಟ್ರ ಮೂಲದ ದಂಪತಿಯ 3 ವರ್ಷ ವಯಸ್ಸಿನ ದೇವನಾ ಎಂಬ ಮಗುವನ್ನು ಪ್ಲೇ ಸ್ಕೋಲಿಗೆ ಕಳುಹಿಸಲಾಗಿತ್ತು. ಶಾಲೆಯಿಂದ ಕರೆತರುವ ಸಮಯದಲ್ಲಿ ಮಗುವು ಕಾರಿನ ಹಿಂಬಾಗದ ಸೀಟಿನಲ್ಲಿ ಮಲಗಿತ್ತು. ಎಲ್ಲಾ ಮಕ್ಕಳನ್ನು ಅವರವರ ಮನೆಗೆ ತಲುಪಿಸಿದ ನಂತರ ಚಾಲಕನು ಮಲಗಿದ ಮಗುವಿನ ಬಗ್ಗೆ ಗಮನಹರಿಸಲೇ ಇಲ್ಲ. ತನ್ನ ಕಾರಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದನು.
ಇದೀಗ ಕುವೈಟ್ ನಲ್ಲಿ ಹೊರಗಿನ ತಾಪಮಾನ 50 ಡಿಗ್ರಿಗಿಂತಲೂ ಜಾಸ್ತಿ ಇದೆ. ಒಳಗೆ ಮಲಗಿದ್ದ ಮಗುವು ವಿಪರೀತ ಸೆಕೆಯನ್ನು ತಾಳಲಾರದೇ ಉಸಿರುಗಟ್ಟಿ ದಾರುಣವಾಗಿ ಮರಣ ಹೊಂದಿದೆ. ಸಂಜೆ ಹೊತ್ತು ಮಗುವು ಮನೆಗೆ ಬಾರದ ಬಗ್ಗೆ ಚಾಲಕನಲ್ಲಿ ವಿಚಾರಿಸಿದಾಗ ಮಗುವು ಕಾರಿನಲ್ಲಿ ಮರಣ ಹೊಂದಿರುವುದು ತಿಳಿದು ಬಂತು. ಮಗುವನ್ನು ಕಳೆದುಕೊಂಡ ಹೆತ್ತವರ ರೋದನ ಮುಗಿಲು ಮುಟ್ಟುವಂತಿತ್ತು.
ಹೆಚ್ಚಿನ ವಿಚಾರಣೆಗಾಗಿ ಕಾರಿನ ಚಾಲಕ ಹಾಗೂ ಶಾಲೆಯ ಗುಮಾಸ್ತನನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಮಗುವಿನ ತಂದೆಯು ಕುವೈಟ್ ನ್ಯಾಶನಲ್ ಪೆಟ್ರೋಲಿಯಂ ಕಂಪೆನಿ (ಕೆ.ಎನ್.ಪಿ.ಸಿ) ಯಲ್ಲಿ ಉದ್ಯೋಗದಲ್ಲಿದ್ದಾರೆ.
ವರದಿ: ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ